ಮಳೆಗಾಲ ಅಡಿ ಇಡುತ್ತಿರುವಂತೆಯೇ ಎರಡನೇ ದಿನವೂ ಟೈಗರ್ ಕಾರ್ಯಾಚರಣೆಯನ್ನು ಮಂಗಳೂರು ಮಹಾ ನಗರ ಪಾಲಿಕೆ ಮುಂದುವರೆಸಿದೆ. ಮಹಾನಗರ ಪಾಲಿಕೆ ಆಯುಕ್ತರ ಆದೇಶದ ಮೇರೆಗೆ, ಕಂದಾಯ ಇಲಾಖೆ ಉಪಾಯುಕ್ತರಾದ ಶ್ರೀಮತಿ ಅಕ್ಷತಾ ಕೆ ನೇತೃತ್ವದಲ್ಲಿ ಲೇಡಿಹಿಲ್ ವ್ರತ್ತದಿಂದ ಚಿಲಿಂಬಿ ಆಸುಪಾಸು ರಸ್ತೆ, ಫುಟ್ಪಾತ್ ಸ್ಥಳ ಅತಿಕ್ರಮಣ ಮಾಡಿದ ಬೀದಿಬದಿ ವ್ಯಾಪಾರಸ್ಥರನ್ನು ತೆರವು ಮಾಡಲಾಯಿತು.

ಆಮ್ಲೆಟ್ ಅಂಗಡಿ ಇಟ್ಟು ವ್ಯಾಪಾರ ಮಾಡುವವರ ಸ್ಥಳದಲ್ಲಿ ಬಿಯರ್ ಬಾಟಲುಗಳು ಸಹಿತ ಇತರ ಬಾಟಲುಗಳ ರಾಶಿ ಕಂಡು ಬಂತು.ಬೀದಿ ಬದಿ ಗೂಡಂಗಡಿ ಮೂಲಕ ವ್ಯಾಪಾರ ಮಾಡುವವರು ಆಮ್ಲೆಟ್ ಪೂರೈಸುತ್ತ ಜೊತೆಗೆ ಅಮಲು ಪದಾರ್ಥ ಸೇವನೆಗೂ ಅವಕಾಶ ಕೊಡುತ್ತಿರುವುದು ಇಂದಿನ ಕಾರ್ಯಾಚರಣೆಯಲ್ಲಿ ಸಾರ್ವಜನಿಕವಾಗಿ ಬೆಳಕಿಗೆ ಬಂದಿತು. ಗೂಡಂಗಡಿ ವ್ಯಾಪಾರಿಗಳು ತಮ್ಮಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಕೂಡಾ ಸರಿಯಾಗಿ ನಿರ್ವಹಿಸುತ್ತಿರಲಿಲ್ಲ. ಕುಡಿದು ಬಿಸಾಡಿದ ಬಾಟಲುಗಳಲ್ಲಿ, ಬೊಂಡದ ತ್ಯಾಜ್ಯಗಳಲ್ಲಿ ನೀರು ನಿಂತು ಅವು ಸೊಳ್ಳೆಗಳ ಉತ್ಪಾದನಾ ತಾಣಗಳಾಗಿದ್ದವು.

ಮಳೆಗಾಲದಲ್ಲಿ ಅವು ಮಲೇರಿಯಾ, ಡೆಂಗ್ಯೂ ಮತ್ತಿತರ ಸೊಳ್ಳೆಗಳಿಂದ ಹರಡುವ ರೋಗಗಳಿಗೆ ಅನುಕೂಲಕರ ತಾಣವಾಗಿರುವುದೂ ಕಾರ್ಯಾಚರಣೆ ವೇಳೆ ಕಂಡು ಬಂದಿತು.



