ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಮೂಡಬಿದಿರೆ ರಸ್ತೆಯಲ್ಲಿ ಲೊರೆಟ್ಟೊ ಕಮಲ್ ಕಟ್ಟೆ ಎಂಬಲ್ಲಿ ಬೃಹತ್ ಗಾತ್ರದ ಬಂಡೆ ಕಲ್ಲು ರಸ್ತೆಗೆ ಬಿದ್ದು ಎರಡು ದಿವಸಗಳಾದರೂ ಸಂಬ0ಧ ಪಟ್ಟ ಇಲಾಖೆಯಿಂದ ತೆರವು ಮಾಡುವ ಕಾರ್ಯ ನಡೆದಿಲ್ಲ ಎಂಬ ಅರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಕಮಲ್ ಕಟ್ಟೆ ಎಂಬಲ್ಲಿ ಗುಡ್ಡವನ್ನು ಅಗೆದು ಮಣ್ಣು ತೆಗೆಯಲಾಗಿದೆ. ಅ ಗುಡ್ಡದ ಮೇಲಿದ್ದ ಎರಡು ಕಲ್ಲುಬಂಡೆಗಳು ರಸ್ತೆಗೆ ಉರುಳಿ ಬಿದ್ದಿದೆ. ಒಂದು ಬಂಡೆ ರಸ್ತೆಯ ಮೇಲೆ ಸಂಚಾರಕ್ಕೆ ಅಡಚಣೆಯನ್ನು ಉಂಟುಮಾಡಿದರೆ ಇನ್ನೊಂದು ಕಲ್ಲು ರಸ್ತೆಯ ಬದಿಯಲ್ಲಿ ಬಿದ್ದಿದೆ. ಇದರ ಜೊತೆಗೆ ಜಾಹಿರಾತು ಫಲಕದ ಕಂಬವೊ0ದು ರಸ್ತೆಗೆ ಬಿದ್ದಿದೆ. ಕಲ್ಲುಬಂಡೆ ಹಾಗೂ ಜಾಹೀರಾತು ಫಲಕದ ಕಂಬ ಎರಡು ಕೂಡ ರಸ್ತೆಯ ಮೇಲೆ ಬಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ. ಈ ರಸ್ತೆಯಲ್ಲಿ ಅತೀ ಹೆಚ್ಚು ವಾಹನಗಳು ಸಂಚಾರ ಮಾಡುತ್ತಿದ್ದು ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ಜೀವಕ್ಕೆ ಅಪಾಯ ಆಗುವ ಸಾಧ್ಯತೆಗಳು ಹೆಚ್ಚು ಇವೆ. ಹಾಗಾಗಿ ಎರಡು ದಿನಗಳಿಂದ ನಿರ್ಲಕ್ಷ್ಯವಹಿಸಿರುವ ಇಲಾಖೆಯ ಬಗ್ಗೆ ಸಾರ್ವಜನಿಕರು ಅಪಸ್ವರ ಎತ್ತಿದ್ದಾರೆ. ಅಪಾಯ ಆಗುವ ಮುನ್ನ ಇಲಾಖೆ ಎಚ್ಚೆತ್ತುಕೊಂಡು ಸಮಸ್ಯೆಗೆ ಮುಕ್ತಿನೀಡುವಂತೆ ಸಾರ್ವಜನಿಕ ಮನವಿಯಾಗಿದೆ.



