ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದ ಮೂರೂವರೆ ವರ್ಷದ ಬಾಲಕಿ ಮೃತಪಟ್ಟ ದಾರುಣ ಘಟನೆ ಮಂಡ್ಯದ ಸ್ವರ್ಣಸಂದ್ರ ಬಳಿ ನಡೆದಿದೆ. ಮೃತ ಬಾಲಕಿಯನ್ನು ಮದ್ದೂರು ತಾಲೂಕಿನ ಗೊರವನಹಳ್ಳಿಯ ವಾಣಿ ಮತ್ತು ಅಶೋಕ್ ದಂಪತಿಯ ಪುತ್ರಿ ಹೃತೀಕ್ಷಾ ಎಂದು ಗುರುತಿಸಲಾಗಿದೆ. ಬಾಲಕಿಗೆ ನಾಯಿ ಕಚ್ಚಿದ್ದರಿಂದ ಆಸ್ಪತ್ರೆಗೆ ದಂಪತಿ ಕರೆದುಕೊಂಡು ಬರುತ್ತಿದ್ದರು. ಈ ವೇಳೆ, ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪೊಲೀಸರು ಹೆಲ್ಮೆಟ್ ತಪಾಸಣೆಗೆ ತಡೆದಿದ್ದಾರೆ. ಇದರಿಂದ ಬೈಕ್ ಆಯ ತಪ್ಪಿ ಬಿದ್ದು, ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ತೀವ್ರ ರಕ್ತಸ್ರವದಿಂದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

ರಸ್ತೆಯಲ್ಲೇ ಮಗುವನ್ನು ಮಡಿನಲ್ಲಿಟ್ಟುಕೊಂಡು ತಂದೆ-ತಾಯಿ ಗೋಳಾಡಿದ್ದಾರೆ. ಅಲ್ಲದೇ ಸಾರ್ವಜನಿಕರು, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಘಟನೆಯ ವರದಿ ಪಡೆದು, ಸ್ಥಳದಲ್ಲಿದ್ದ ಮೂವರು ಎಎಸ್‌ಐಗಳನ್ನು ಸಸ್ಪೆಂಡ್ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಘಟನೆ ಬಗ್ಗೆ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಪ್ರತಿಕ್ರಿಯಿಸಿ, ನಾನು ಸಂತ್ರಸ್ತರನ್ನು ಭೇಟಿಯಾಗಿ ಮಾತನಾಡುತ್ತೇನೆ. ಘಟನೆಗೆ ಕಾರಣರಾದ ಪೊಲೀಸರನ್ನು ಅಮಾನತುಗೊಳಿಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಘಟನೆಗೆ ಕಾರಣರಾದ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಘಟನೆ ಖಂಡಿಸಿ ಪೊಲೀಸರ ವಿರುದ್ಧ ಪೋಷಕರು, ಸಂಬಂಧಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ, ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸಪಟ್ಟರು. ಈ ವೇಳೆ ಮಾತನಾಡಿದ ಅವರು, ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇನೆ. ಕರ್ತವ್ಯದಲ್ಲಿದ್ದ ಮೂವರು ಎಎಸ್‌ಐಗಳನ್ನು ಅಮಾನತು ಮಾಡಲಾಗಿದೆ. ಪ್ರಕರಣ ಸಂಬಂಧ ಇಲಾಖಾ ತನಿಖೆ ಮಾಡುತ್ತೇವೆ. ಅಲ್ಲದೇ ಶಾಸಕರ ಜತೆ ಮಾತನಾಡಿದ್ದು, ಮಗು ಕುಟುಂಬಕ್ಕೆ ಅಗತ್ಯ ಪರಿಹಾರದ ಭರವಸೆ ನೀಡಿದ್ದಾರೆ ಎಂದು ಮೃತ ಮಗುವಿನ ಪೋಷಕರು, ಪ್ರತಿಭಟನಾಕಾರರಿಗೆ ತಿಳಿಸಿದರು.



