ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುವಂತೆ ಆಗ್ರಹಿಸಿ ಬಜಪೆ ಪೇಟೆಯ ಶಾರದಾ ಮಂಟಪದ ಬಳಿ ನಡೆದ ಬೃಹತ್ ಜನಾಗ್ರಹ ಸಮಾವೇಶಕ್ಕೆ ಪೊಲೀಸ್ ಅನುಮತಿ ಪಡೆದಿಲ್ಲ ಹಾಗೂ ಸಮಾವೇಶದಲ್ಲಿ ಭಾಗವಹಿಸಿದ ಮುಖ್ಯ ಭಾಷಣಕಾರಾರ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಜಪೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಜಪೆ ಠಾಣೆಯ ಕಾನ್‌ಸ್ಟೇಬಲ್ ಚಿದಾನಂದ ಕಟೆ ಅವರು ದೂರು ದಾಖಲಿಸಿದ್ದು, ಬಜಪೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗಳದ ವತಿಯಿಂದ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಸುಮಾರು 3 ಸಾವಿರ ಮಂದಿ ಭಾಗವಹಿಸಿದ್ದಾರೆ. ಕಾರ್ಯಕ್ರಮ ಆಯೋಜನೆಗಾಗಲೀ ಅಥವಾ ಧ್ವನಿವರ್ಧಕ ಬಳಸುವುದಕ್ಕಾಗಲೀ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ.

ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಬಜಪೆ ಪೇಟೆಯ ಬಸ್ಸು ನಿಲ್ದಾಣಕ್ಕೆ ಬರುವ ಮತ್ತು ನಿಲ್ದಾಣದಿಂದ ಹೊರಹೋಗುವ ರಸ್ತೆಯನ್ನು ಉದ್ದೇಶ ಪೂರ್ವಕವಾಗಿ ಅಕ್ರಮ ಕೂಟ ಕಟ್ಟಿಕೊಂಡು ತಡೆದಿದ್ದಾರೆ. ರಾಜ್ಯ ಹೆದ್ದಾರಿ 67ರ ಇಕ್ಕೆಲಗಳಲ್ಲಿ ಮತ್ತು ಹೆದ್ದಾರಿಯ ಮಧ್ಯದಲ್ಲಿಯೂ ನಿಂತು ವಾಹನಗಳು ಮತ್ತು ಜನ ಸಾಮಾನ್ಯರ ಮುಕ್ತ ಓಡಾಟಕ್ಕೆ ಅಡ್ಡಿಪಡಿಸಿದ್ದಾರೆ. ಸಭೆಯಲ್ಲಿ ಓರ್ವ ಭಾಷಣಕಾರ ಧರ್ಮ-ಧರ್ಮಗಳ ನಡುವೆ ದ್ವೇಷವನ್ನು ಉಂಟುಮಾಡಿ, ಗಲಭೆ ಸೃಷ್ಟಿಸುವ ಹಾಗೂ ಜೀವ ಬೆದರಿಕೆ ಹಾಕುವ ರೀತಿಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ.

ಭಾಷಣಕಾರರು ಮತ್ತು ಸಂಘಟಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಬಜಪೆ ಪೊಲೀಸರ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.



