ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಯೋಧನನ್ನು ಅರೆಸ್ಟ್ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯು ಸಂಭವಿಸುವ ಕೇವಲ ಆರು ದಿನಗಳ ಮೊದಲು, ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಯೋಧನನ್ನು ಅಲ್ಲಿಂದ ವರ್ಗಾವಣೆ ಮಾಡಲಾಗಿತ್ತು ಎಂದು ವರದಿಯಾಗಿದೆ.

ಆರೋಪಿಯಾದ ಸಹಾಯಕ ಉಪ-ನಿರೀಕ್ಷಕ ಮೋತಿ ರಾಮ್ ಜಾಟ್, ಪಹಲ್ಗಾಮ್‌ನಲ್ಲಿ CRPFನ 116ನೇ ಬೆಟಾಲಿಯನ್‌ನಲ್ಲಿ ಕರ್ತವ್ಯದಲ್ಲಿದ್ದ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ದೆಹಲಿಯಲ್ಲಿ ಜಾಟ್‌ನನ್ನು ಬಂಧಿಸಿದ್ದು, 2023ರಿಂದ ಆತ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಗೆ (PIO) ಹಣಕ್ಕಾಗಿ ಗೌಪ್ಯ ಮಾಹಿತಿಯನ್ನು ರವಾನಿಸುತ್ತಿದ್ದ ಎಂದು ತಿಳಿಸಿದೆ. ಭಾರತೀಯ ಭದ್ರತಾ ಪಡೆಗಳ ಕಾರ್ಯಾಚರಣೆಯ ವಿವರಗಳು, ಚಲನೆಯ ಮಾದರಿಗಳು ಮತ್ತು ಪ್ರಮುಖ ಸೈನಿಕ ಸ್ಥಳಗಳ ಮಾಹಿತಿಯನ್ನು ಆತ ರವಾನಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧನದ ನಂತರ ಮೋತಿ ರಾಮ್ ಜಾಟ್‌ನನ್ನು ಕೇಂದ್ರೀಯ ಪಡೆಯಿಂದ ವಜಾಗೊಳಿಸಲಾಗಿದೆ. ಈಗ ಆತನನ್ನು NIA ಅಧಿಕಾರಿಗಳು ವಿಚಾರಣೆಗೊಳಪಡಿಸುತ್ತಿದ್ದಾರೆ. ಪಹಲ್ಗಾಮ್ ದಾಳಿಯೊಂದಿಗೆ ಆತನ ಸಂಭವನೀಯ ಸಂಪರ್ಕವನ್ನು ಮತ್ತು ಗೂಢಚಾರಿಕೆ ಜಾಲದ ಆಳವನ್ನು ತನಿಖೆ ಮಾಡಲಾಗುತ್ತಿದೆ. “ಕೇಂದ್ರೀಯ ಏಜೆನ್ಸಿಗಳು ಮೋತಿ ರಾಮ್ ಜಾಟ್‌ನ ಸಾಮಾಜಿಕ ಜಾಲತಾಣ ಚಟುವಟಿಕೆಗಳನ್ನು ಗುರುತಿಸಿದವು, ಇವು ಸ್ಥಾಪಿತ ನಿಯಮಗಳು ಮತ್ತು ಪ್ರೋಟೋಕಾಲ್‌ಗಳ ಉಲ್ಲಂಘನೆಯಾಗಿವೆ” ಎಂದು ತಿಳಿಸಿದೆ. “21.05.2025ರಿಂದ ಮೋತಿ ರಾಮ್ ಜಾಟ್‌ನನ್ನು ಭಾರತದ ಸಂವಿಧಾನ ಮತ್ತು CRPF ನಿಯಮಗಳ ಸಂಬಂಧಿತ ವಿಧಿಗಳ ಅಡಿಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ” ಎಂದು CRPF ಹೇಳಿಕೆಯಲ್ಲಿ ತಿಳಿಸಲಾಗಿದೆ. ಮೋತಿ ರಾಮ್ ಜಾಟ್‌ನನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಜೂನ್ 6ರವರೆಗೆ NIA ವಶಕ್ಕೆ ನೀಡಲಾಗಿದೆ.



