ಮಳೆಗಾಲ ಆರಂಭಕ್ಕೂ ಎರಡು ತಿಂಗಳು ಮುನ್ನ ರಸ್ತೆ ಬದಿಯ ತೋಡುಗಳ ಹೂಳೆತ್ತದ ಪರಿಣಾಮ ಈ ಬಾರಿ ನಗರದ ಹಲವು ಕಡೆ ಕೃತಕ ನೆರೆ ಸೃಷ್ಟಿಯಾಗಿ ಸಾಕಷ್ಟು ಸಮಸ್ಯೆ ಆಗಿತ್ತು.

ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಆರೋಪಿಸಿದ್ರು. ಇದಕ್ಕೆ ಸಾಕಷ್ಟು ಮಂದಿ ಸದಸ್ಯರು ಧ್ವನಿಗೂಡಿಸಿದ್ದಾರೆ. ಇದಕ್ಕೆ ಉತ್ತರಿಸಿದ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಅವರು, ಈ ಸಂಬAಧ ಶಾಸಕರು ಹಾಗೂ ಅಧ್ಯಕ್ಷರು ತಿಂಗಳಿಗೆ ಮೂರು ಬಾರಿಯಂತೆ ಸಭೆ ನಡೆಸಿದರೂ ಹೂಳೆತ್ತುವ ಕಾಮಗಾರಿ ನಡೆಸಿಲ್ಲ. ಅಧಿಕಾರಿಗಳು ಅಧ್ಯಕ್ಷರ ಮಾತು ಕೇಳುತ್ತಿಲ್ಲವೇ?. ಇದಕ್ಕೆ ಅಧ್ಯಕ್ಷರು ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ. ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದುರ್ಗಾ ಪ್ರಸಾದ್ ಅವರು, ಎರಡು ವರ್ಷಕ್ಕೊಮ್ಮೆ ನಗರದ ದೊಡ್ಡ ತೋಡುಗಳ ಹೂಳೆತ್ತುವುದು ವಾಡಿಕೆ. ರಸ್ತೆ ಬದಿಯ ತೋಡುಗಳ ಹೂಳೆತ್ತುವ ಕಾಮಗಾರಿಯನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಆದರೆ, 15 ದಿನ ಮುಂಚಿತವಾಗಿ ಮಳೆ ಬಂದ ಕಾರಣ ಹೂಳೆತ್ತುವ ಕಾಮಗಾರಿಗೆ ತೊಡಕಾಗಿದೆ. ಶಾಸಕರು ಸೂಚಿಸಿದ ಹಿನ್ನೆಲೆಯಲ್ಲಿ ಕಲ್ಸಂಕ ತೋಡಿನ ಹೂಳೆತ್ತುವ ಕಾಮಗಾರಿಗೆ ಏಪ್ರಿಲ್‌ನಲ್ಲಿ ಟೆಂಡರ್ ಕರೆದು, ಕಾಮಗಾರಿ ಆರಂಭಿಸಲಾಗಿತ್ತು. ಈಗಾಗಲೇ ಶೇ.80ರಷ್ಟು ಕಾಮಗಾರಿಯನ್ನು ಮುಗಿಸಲಾಗಿದೆ. ಇನ್ನೂ ಶೇ. 20ರಷ್ಟು ಕಾಮಗಾರಿ ಬಾಕಿ ಇದೆ. ಆದರೆ ಮಳೆಯಿಂದಾಗಿ ಅದಕ್ಕೆ ಸಮಸ್ಯೆ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.



