ಮಂಗಳವಾರ ಮಧ್ಯಾಹ್ನ ಬಂಟ್ವಾಳದ ಇರಾಕೋಡಿಯಲ್ಲಿ ಹತ್ಯೆಗೀಡಾದ ಕೊಳತ್ತಮಜಲಿನ ಬೆಳೂರು ನಿವಾಸಿ ಪಿಕಪ್ ವಾಹನ ಚಾಲಕ ಅಬ್ದುಲ್ ರಹಮಾನ್ ಅವರ ಮೃತದೇಹ ಇರಿಸಿದ್ದ ಯೆನಪೊಯಾ ಆಸ್ಪತ್ರೆ ಎದುರು ಜಮಾಯಿಸಿದ್ದ ಗುಂಪು ಕೃತ್ಯಕ್ಕೆ ಕಾರಣರಾದವರನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿತು.

ಒಂದು ಹಂತದಲ್ಲಿ ಪೊಲೀಸರ ಜೊತೆ ತೀವ್ರ ವಾಗ್ವಾದಕ್ಕೆ ಇಳಿದ ಯುವಕರ ಗುಂಪು ಬುಧವಾರ ದಕ್ಷಿಣ ಕನ್ನಡ ಬಂದ್‌ಗೆ ಕರೆಕೊಡುವುದಾಗಿ ಹೇಳಿತು. ಈ ಹಂತದಲ್ಲಿ ಅಲ್ಲಿದ್ದ ಹಿರಿಯರು ಅವರನ್ನು ಸಮಾಧಾನ ಮಾಡಿದ್ರು. ಗಾಯಾಳು ಖಲಂದರ್ ಶಾಫಿಯನ್ನು ದಾಖಲಿಸಿದ್ದ ಹೈಲ್ಯಾಂಡ್ ಆಸ್ಪತ್ರೆ ಎದುರು ಕೂಡಾ ಯುವಕರ ಗುಂಪು ಹತ್ಯೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಡಿದು ತಿನ್ನುವವರ ಜೀವಕ್ಕೆ ಬೆಲೆ ಇಲ್ಲವೇ, ಯಾವ ಪ್ರಕರಣಗಳಲ್ಲೂ ಇಲ್ಲದ ಮುಗ್ಧರು ಜೀವ ಕಳೆದುಕೊಳ್ಳುತ್ತಿದ್ದಾರೆ, ಇದಕ್ಕೆ ಕೊನೆ ಯಾವಾಗ ಎಂದು ಪ್ರಶ್ನಿಸಿತು. ಬಜ್ಪೆ ಚಲೋ ಸಂದರ್ಭದಲ್ಲಿ ಮಾಡಿದ ಉದ್ರಿಕ್ತ ಭಾಷಣಗಳು ಇದಕ್ಕೆ ಕಾರಣ, ಸಮುದಾಯಗಳ ನಡುವೆ ದ್ವೇಷ ಹರಡುವವರ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದೂ ಗುಂಪು ಆಕ್ರೋಶ ವ್ಯಕ್ತಪಡಿಸಿತು.



