ನೈಜ ಘಟನೆಯ ಆಧಾರಿತ ಅನೇಕ ಸಿನಿಮಾಗಳು ಈಗಾಗಲೇ ಮೂಡಿ ಬಂದು ಅನೇಕ ಪ್ರೇಕ್ಷಕರ ಮನ ಗೆದ್ದಿದೆ, ಅಂತೆಯೇ ಸಿನಿಮಾದಲ್ಲಿ ತೋರಿಸುವ ಘಟನಾವಳಿಗಳು ಮನಸ್ಸನ್ನು ತಲ್ಲಣಗೊಳಿಸುವುದೂ ಉಂಟು. ಅತ್ಯಾಚಾರಕ್ಕೆ ಒಳಗಾದ ಅನೇಕ ಮಹಿಳೆಯರ ಬಗ್ಗೆಯೂ ಸಿನಿಮಾಗಳು ಬಂದಿವೆ. ಅಂತಹದ್ದೇ ಸಾಲಿನಲ್ಲಿ ಧರ್ಮಸ್ಥಳದಲ್ಲಿ ನಡೆದ ಘಟನೆಯೊಂದು ಚಲನಚಿತ್ರವಾಗಿ ಮೂಡಿಬರಲಿದೆ. ಜನ ಸಮೂಹವನ್ನೇ ಬೆಚ್ಚಿ ಬೀಳಿಸಿದ ಉಜಿರೆಯ ಸೌಜನ್ಯ ಅತ್ಯಾಚಾರ ಹಾಗೂ ಕೊಲೆಯನ್ನು ಆಧಾರಿಸಿ ಸ್ಯಾಂಡಲ್‌ವುಡ್ ನಲ್ಲಿ ಸಿನಿಮಾವೊಂದು ಸಿದ್ಧವಾಗುತ್ತಿದೆ. ಈ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ ಆಗಿದೆ. ಜಿಕೆ ವೆಂಚರ್ಸ್ ಈ ಟೈಟಲ್ ನೋಂದಣಿ ಮಾಡಿಸಿದೆ. ವಿ. ಲವ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಾಮಾಜಿಕ ಕಥಾ ಹಂದರ ಹೊಂದಿರಲಿದೆ. ಈ ಚಿತ್ರ ಕನ್ನಡದಲ್ಲಿ ಮಾತ್ರ ಸಿದ್ಧವಾಗಲಿದೆ.
ನಡೆದದ್ದಾದರೂ ಏನು?
2012ರಲ್ಲಿ ನಡೆದ ಉಜಿರೆ ಎಸ್. ಡಿ. ಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅವರು ಅಕ್ಟೋಬರ್ 9 ರಂದು ಕಾಲೇಜಿಗೆ ಹೋಗಿದ್ದು ಮರಳಿ ಬಾರದೆ ಇದ್ದಾಗ ಮನೆಯವರು ಮಿಸ್ಸಿಂಗ್ ಕೇಸ್ ಫೈಲ್ ಮಾಡುತ್ತಾರೆ. ಅಕ್ಟೋಬರ್ 10 2022 ರಂದು ಧರ್ಮಸ್ಥಳದ ಮಣ್ಣಸಂಖ ದಲ್ಲಿ ಅವರ ಶವ ಅರೆನಗ್ನ ಸ್ತಿತಿಯಲ್ಲಿ ಪತ್ತೆಯಾಯಿತು. ಸೌಜನ್ಯ ಮೇಲೆ ಅತ್ಯಾಚಾರ ಕೂಡ ನಡೆದಿತ್ತು. ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಸಂತೋಷ್ ರಾವ್ ಅವರು ನಿರ್ದೋಷಿ ಎಂದು ಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು. ಇಷ್ಟು ವರ್ಷಗಳು ಕಳೆದರೂ ಸೌಜನ್ಯಾ ಕೇಸ್ ಬಗೆಹರಿಸಲು ಸಾಧ್ಯವಾಗಲಿಲ್ಲ. ಕಾಣದ ಕೈಗಳ ಕುತಂತ್ರಕ್ಕೆ ನ್ಯಾಯ ಮರುಭೂಮಿಯ ಮರೀಚಿಕೆಯಾಗಿದೆ.



