ವಿದ್ಯಾರ್ಥಿಗಳು ಅಂಕ ಗಳಿಸುವುದರ ಜೊತೆಗೆ ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು. ಕೇವಲ ಸ್ಮರಣಶಕ್ತಿಯನ್ನು ವೃದ್ಧಿಸಿಕೊಂಡು ಅಂಕ ಗಳಿಸಿದರೆ ಅದು ಒಂದು ವಿಧದ ಸಾಧನೆ ಮಾತ್ರ ಆಗುತ್ತದೆ.

ಪರಿಪೂರ್ಣವಾದ ಸಾಧನೆ ಆಗುವುದಿಲ್ಲ. ಸೇವೆಯ ಜೊತೆಗೆ ಅಂಕಗಳಿಸಿದಾಗ ಮಾತ್ರ ಪರಿಪೂರ್ಣ ಸಾಧನೆ ಮಾಡಲು ಸಾಧ್ಯ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ ಇದರ ಆಶ್ರಯದಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ 2024-25ನೇ ಸಾಲಿನ ರಾಜ್ಯಮಟ್ಟದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪ್ರತಿಭಾನ್ವಿತ ಸ್ಕೌಟ್ಸ್- ಗೈಡ್ಸ್ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ್ರು. ನಿಸ್ವಾರ್ಥ ಸೇವೆ ಮಾಡಲು ಪ್ರಯತ್ನಿಸಬೇಕು. ಫಲಾಪೇಕ್ಷೆ ಇಲ್ಲದೆ ಸೇವೆ ಮಾಡಬೇಕು. ಕೇವಲ ಬುದ್ಧಿಶಕ್ತಿಯ ಮೇಲೆ ಅಂಕ ನಿರ್ಧಾರವಾಗುವುದಾದರೆ ಎಲ್ಲ ಶ್ರೇಯಸ್ಸು ಕೃತಕ ಬುದ್ಧಿ ಮತ್ತೆಗೆ ಸಲ್ಲಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ನಿಜವಾಗಿ ಕೂಡ ಅಭಿನಂದನೆಗೆ ಅರ್ಹರು. ಅವರು ಅಂಕ ಗಳಿಸುವುದರ ಜೊತೆಗೆ ಸೇವಾ ಪಥವನ್ನು ಸ್ವೀಕರಿಸಿದ್ದಾರೆ ಎಂದಿದ್ದಾರೆ.



