ಬಂಟ್ವಾಳ ತಾಲೂಕಿನ ಕೊಳ್ತಮಜಲು ಎಂಬಲ್ಲಿನ ಅಬ್ದುಲ್ ರಹೀಂ ಎಂಬ ಆಮಾಯಕ ಕೂಲಿ ಕಾರ್ಮಿಕನನ್ನು ದುಷ್ಟ ಶಕ್ತಿಗಳು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದು, ಅಮಾಯಕ ಅಬ್ದುಲ್ ರಹೀಮನ ಕುಟುಂಬಕ್ಕೆ ಸರಕಾರ 50 ಲಕ್ಷ ಪರಿಹಾರ ನೀಡಬೇಕು. ಕರಾವಳಿಯ ಈ ಘಟನೆಗೆ ಪೋಲೀಸ್ ಇಲಾಖೆಯ ವೈಫಲ್ಯ ಮತ್ತು ನಿರ್ಲಕ್ಷ್ಯ ಸ್ಪಷ್ಟವಾಗಿದ್ದು ಸರಕಾರವು ಕರಾವಳಿ ಪೋಲೀಸ್ ಇಲಾಖೆಯಲ್ಲಿ ಶೀಘ್ರದಲ್ಲೇ ಬದಲಾವಣೆ ತರಬೇಕು ಎಂದು ಎಸ್.ಕೆ.ಎಸ್.ಎಸ್.ಎಫ್ ದ.ಕ. ಈಸ್ಟ್ ಜಿಲ್ಲೆ ಸಮಿತಿ ಆಗ್ರಹಿಸಿದೆ. 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ದ.ಕ ಜಿಲ್ಲೆಯಲ್ಲಿ ಕೋಮು ಪ್ರೇರಿತ ಕೊಲೆಗಳ ಸರಣಿ ಮುಂದುವರಿಯುತ್ತಿದ್ದು, ಇದು ಸಾರ್ವಜನಿಕರನ್ನು ಭಯಭೀತರಾಗಿಸಿದೆ. ಜನ ಸಾಮಾನ್ಯರ ವಿಶೇಷವಾಗಿ ದಿನಕೂಲಿ ಕೆಲಸ ಮಾಡಿ ಬದುಕುವವರ ಬದುಕಿನ ದಾರಿಯನ್ನು ಇದು ಕುಸಿಯುತ್ತಿದೆ ಎಂದು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಕಾನೂನಿನ ಭಯವಿಲ್ಲದೆ ಕೋಮು ದ್ವೇಷ ಭಾಷಣ ಮಾಡುವವನನ್ನು ಕೂಡಲೇ ಬಂಧಿಸಬೇಕು. ಈ ದುಷ್ಕೃತ್ಯದ ಕೊಲೆಗಾರರು ಮತ್ತು ಸಂಚು ರೂಪಿಸಿದವರ ವಿರುದ್ಧ ಕಠಿಣ ಕ್ರಮ ಕ್ಷಿಪ್ರವಾಗಿ ಜರಗಿಸಬೇಕು. ಈ ಸರಕಾರದ ಮೇಲೆ ನಮಗೆ ವಿಶ್ವಾಸವಿತ್ತು. ಆದರೆ ಅದು ಈಗ ದೂರವಾಗುತ್ತಿದೆ. ಗೃಹ ಸಚಿವರನ್ನು ತಕ್ಷಣ ಬದಲಾವಣೆ ಮಾಡಬೇಕು ಎಂದು ಎಸ್.ಕೆ.ಎಸ್.ಎಸ್.ಎಫ್ ದ.ಕ. ಈಸ್ಟ್ ಜಿಲ್ಲೆ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ ಒತ್ತಾಯಿಸಿದ್ರು. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ, ಕಾರ್ಯದರ್ಶಿ ಅಶ್ರಫ್ ಮುಕ್ವೆ, ಕೋಶಾಧಿಕಾರಿ ಜಮಾಲ್ ಕೋಡಪದವು ಉಪಸ್ಥಿತರಿದ್ರು.



