ಆರ್.ಎಸ್.ಎಸ್.ಪ್ರಮುಖರಾದ ಡಾ.ಕಲ್ಲಡ್ಕ ಪ್ರಭಾಕರ್ ಸಹಿತ ಅನೇಕ ಹಿಂದೂ ನಾಯಕರುಗಳನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸುವ ಮೂಲಕ ಕಿರುಕುಳ ನೀಡುವುದಲ್ಲದೆ, ಜಿಲ್ಲೆಯಲ್ಲಿ ಅಶಾಂತಿ ತಲೆದೋರುವಂತೆ ಮಾಡುವ ರಾಜ್ಯ ಸರಕಾರದ ನೀತಿ ಖಂಡನೀಯ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದ್ದಾರೆ.

ಇತ್ತೀಚಿಗೆ ಕೊಲೆಯಾದ ಸುಹಾಸ್ ಶೆಟ್ಟಿ ಅವರ ಶೃದ್ದಾಂಜಲಿ ಸಭೆಯಲ್ಲಿ ಮಾಡಿದ ಭಾಷಣದಿಂದ ಮತೀಯ ಗುಂಪುಗಳ ನಡುವೆ ವೈಮನಸ್ಸು ಮಾಡುವಂತೆ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪ ಮಾಡಿ ಪ್ರಕರಣ ದಾಖಲಿಸಿರುವುದು ನೋಡಿದರೆ ಜಿಲ್ಲೆಯಲ್ಲಿ ಕೋಮು ದ್ವೇಷವನ್ನು ರಾಜ್ಯ ಸರಕಾರ ಪೋಲೀಸ್ ಇಲಾಖೆಯ ಮುಖಾಂತರ ಮಾಡುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದಿದ್ದಾರೆ. ದ್ವೇಷ ಭಾಷಣದ ವಿಚಾರದಲ್ಲಿ ಕೇವಲ ಹಿಂದೂ ನಾಯಕರುಗಳನ್ನು ಗುರಿಯಾಗಿಸಿ ಪ್ರಕರಣ ದಾಖಲಿಸುವ ಸರಕಾರದ ಕ್ರಮ ಸರಿಯಾ ಎಂದು ಪ್ರಶ್ನಿಸಿದ್ದಾರೆ.



