ಕಾಮಿಡಿ ಕಿಲಾಡಿಗಳು ಶೋ ಮೂಲಕ ಮನೆಮಾತಾಗಿದ್ದ ನಟ ರಾಕೇಶ್ ಪೂಜಾರಿ ಅವರ ನಿಧನಕ್ಕೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ರು.

ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಕೂಡ ರಾಕೇಶ್ ಪೂಜಾರಿ ಅವರು ನಟಿಸುತ್ತಿದ್ರು. ಆದರೆ ರಾಕೇಶ್ ನಿಧನರಾದಾಗ ಈ ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಅಂತಿಮ ದರ್ಶನ ಪಡೆಯಲು ಬರಲಿಲ್ಲ ಎಂಬುದು ಸಾಕಷ್ಟು ಚರ್ಚೆ ಆಗಿತ್ತು. ಈಗ ರಾಕೇಶ್ ಪೂಜಾರಿ ಮನೆಗೆ ರಿಷಬ್ ಶೆಟ್ಟಿ ಭೇಟಿ ನೀಡಿದ್ದಾರೆ.ರಾಕೇಶ್ ಪೂಜಾರಿ ನಿಧನರಾಗಿ 21 ದಿನಗಳು ಕಳೆದ ಬಳಿಕ ಅವರ ಮನೆಗೆ ರಿಷಬ್ ಶೆಟ್ಟಿ ಬಂದಿದ್ದಾರೆ. ರಾಕೇಶ್ ಪೂಜಾರಿ ಕುಟುಂಬಸ್ಥರಿಗೆ ರಿಷಬ್ ಶೆಟ್ಟಿ ಹಾಗು ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಸಾಂತ್ವಾನ ಹೇಳಿದ್ದಾರೆ. ಉಡುಪಿಯ ಹೂಡೆಯಲ್ಲಿ ರಾಕೇಶ್ ಪೂಜಾರಿ ಮನೆ ಇದೆ. ಅಲ್ಲಿ ರಾಕೇಶ್ ತಂಗಿ ಮತ್ತು ತಾಯಿ ವಾಸವಾಗಿದ್ದಾರೆ.

ರಿಷಬ್ ಶೆಟ್ಟಿ ಅವರು ಕಾಂತಾರ: ಚಾಪ್ಟರ್ 1 ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ ಹಾಗೂ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಾಕೇಶ್ ಪೂಜಾರಿ ಅವರಿಗೂ ಒಂದು ವಿಶೇಷ ಪಾತ್ರ ನೀಡಲಾಗಿತ್ತು. ಶೂಟಿಂಗ್‌ನಲ್ಲಿ ಕೂಡ ಅವರು ಪಾಲ್ಗೊಂಡಿದ್ರು. ಈ ಸಿನಿಮಾ ಮೇಲೆ ಅವರು ಸಖತ್ ಭರವಸೆ ಇಟ್ಟುಕೊಂಡಿದ್ರು. ಆದರೆ ಸಿನಿಮಾದ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಅವರು ನಿಧನ ಹೊಂದಿದ್ದಾರೆ.



