ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ಮತ್ತೆ ಮತ್ತೆ ಶಾಂತಿಯನ್ನು ಕದಡುತ್ತಿವೆ. ಕಳೆದ ಕೆಲವಾರು ವರುಷಗಳಲ್ಲಿ ಇಲ್ಲಿ 50 ಕ್ಕೂ ಅಧಿಕ ಕೊಲೆ ಪ್ರಕರಣಗಳು ನಡೆದಿವೆ. ಇಲ್ಲಿ ಶಾಂತಿ ಸ್ಥಾಪನೆ ಅಗತ್ಯವಿದೆ ಎಂದು ಮಾಜಿ ಸಚಿವ ರಮಾನಾಥ ರೈ ಪ್ರತಿಪಾದಿಸಿದ್ದಾರೆ.
ಇದೇ ಸಂದರ್ಭ ಅವರು ಮಂಗಳೂರು ಮಣಿಪುರ ಆಗುವುದು ಬೇಡ ಎಂದೂ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಪಿ.ಸಿ.ಸಿ. ಉಪಾಧ್ಯಕ್ಷರೂ ಆಗಿರುವ ರಮಾನಾಥ ರೈ ಅವರು, ಈ ಸರಣಿ ಹತ್ಯೆಗಳ ಷಡ್ಯಂತ್ರದ ಹಿಂದೆ ಅಡಗಿರುವ ಪಿತೂರಿದಾರರನ್ನು ಕಂಡು ಹಿಡಿಯಬೇಕು. ಇಲ್ಲಿ ಶಾಂತಿಯನ್ನು ಕಾಪಾಡುವ ಸಲುವಾಗಿ ರೂಪಿತವಾದ ಆ್ಯಂಟಿ ಕಮ್ಯುನಲ್ ಫೋರ್ಸ್ ಶೀಘ್ರವೇ ಕಾರ್ಯಾಚರಣೆ ನಡೆಸಲಿದೆ. ಹಿಂದೆ ಈ ಜಿಲ್ಲೆಯಲ್ಲಿ ಕೊಲೆ, ಶಾಂತಿ ಕದಡುವ ಪ್ರಯತ್ನಗಳು ನಡೆದಾಗ ಶಾಂತಿ ಸಭೆಗಳು ನಡೆಯುತ್ತಿದ್ದವು. ಆದರೆ ಈ ಶಾಂತಿ ಸಭೆಯಲ್ಲಿ ಕೆಲವು ಸಂಘಟನೆಗಳು ಭಾಗವಹಿಸುತ್ತಿರಲಿಲ್ಲ. ಆ ಸಂಘಟನೆಗಳಿಗೆ ಇಲ್ಲಿ ಶಾಂತಿ ಸ್ಥಾಪನೆಗೆ ಬದಲಾಗಿ ಸಂಘರ್ಷದ ವಾತಾವರಣ ಬೇಕಾಗಿರುತ್ತಿತ್ತು ಎಂದಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಶಶಿಧರ್ ಹೆಗ್ಡೆ, ಶುಭೋದಯ ಆಳ್ವ,ದಿನೇಶ್, ಪ್ರಕಾಶ್ ಸಾಲಿಯಾನ್ ಸೇರಿದಂತೆ ಹಲವರು ಉಪಸ್ಥಿತರಿದ್ರು.



