ಕಳೆದ ವಾರ ಸುರಿದ ಭಾರೀ ಮಳೆಗೆ ಪುತ್ತೂರು ತಾಲೂಕಿನ ಕೋಡಿಂಬಾಡಿ, ಬೆಳ್ಳಿಪ್ಪಾಡಿ, 34ನೇ ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು ಗ್ರಾಮದಲ್ಲಿ ತೀವ್ರ ತರದ ಭೂಕುಸಿತ ಉಂಟಾಗಿದ್ದು, ಬೆಳ್ಳಿಪ್ಪಾಡಿ ಗ್ರಾಮದಲ್ಲಿ 5 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 
ನಷ್ಟಕ್ಕೊಳಗಾದ ಮನೆಗಳಿಗೆ ಪರಿಹಾರ ಕೊಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ನಿಷ್ಟ್ರೀಯವಾಗಿದ್ದು, ಕ್ಷೇತ್ರದ ಶಾಸಕರು ಬೆಳ್ಳಿಪ್ಪಾಡಿಗೆ ಬಂದು ಮಾಧ್ಯಮದ ಮುಂದೆ ಪೋಸ್ ಕೊಡುವ ಕೆಲಸ ಮಾಡಿದ್ದಾರೆ. ಹೊರತು ಪರಿಹಾರ ಕೊಡಿಸುವ ಕೆಲಸ ಈವರೆಗೆ ಮಾಡಿಲ್ಲ ಎಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಅತ್ರಮಜಲು ಆರೋಪಿಸಿದ್ದಾರೆ. ಇವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಗ್ರಾಮಗಳ ಪ್ರದೇಶದಲ್ಲಿ ಸುಮಾರು 60 ರಷ್ಟು ಮನೆಗಳ ಮುಂದೆ ಗುಡ್ಡ ಜರಿದು ಬಿದ್ದಿದ್ದು, 12 ಕಡೆಗಳಲ್ಲಿ ರಸ್ತೆ ಬದಿ ದರೆ ಕುಸಿದು ಹಾನಿಯಾಗಿದೆ. ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ಅಡಕೆ ಮರಗಳು ಧರಶಾಹಿಯಾಗಿದೆ. 10 ಕಿ.ಮೀ. ಕೃಷಿ ನಾಶವಾಗಿದೆ. ರಸ್ತೆಗಳಿಗೂ ಹಾನಿಯಾಗಿದೆ. ಬಜತ್ತೂರಿನಲ್ಲಿ ಮೂರು ಮನೆಗಳು ಭಾಗಶಃ ಹಾನಿಯಾಗಿದ್ದು, 18 ಮನೆಗಳಿಗೆ ಧರೆ ಕುಸಿದು ಬಿದ್ದಿದೆ. ಒಟ್ಟಾರೆಯಾಗಿ ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪದಷ್ಟೇ ಇಲ್ಲಿಯೂ ಆಗಿದ್ದು, ಸುಮಾರು 25 ಕೋಟಿಗೂ ಮಿಕ್ಕಿ ಹಾನಿಯಾಗಿದೆ ಎಂದಿದ್ದಾರೆ.



