ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಾದ ಬಳಿಕ ಭಾರತೀಯ ಸೇನೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ಮೇಲೆ ದಾಳಿ ನಡೆಸಿದೆ. ಸೇನೆಯ ಈ ದಿಟ್ಟ ಉತ್ತರಕ್ಕೆ ದೇಶ ಮಾತ್ರವಲ್ಲದೆ, ಇಡೀ ವಿಶ್ವದಿಂದಲೇ ಭಾರೀ ಪ್ರಶಂಸೆ ವ್ಯಕ್ತವಾಗಿದೆ. 
ಈ ಸಾಹಸಮಯ ಕಾರ್ಯಾಚರಣೆಯಲ್ಲಿ ತೊಡಗಿಕೊಂಡ ಸೈನಿಕರ ಗೌರವ ಸಾರ್ವಜನಿಕ ವಲಯದಲ್ಲಿ ದುಪ್ಪಟ್ಟಾಗಿದೆ. ಕಾರ್ಯಾಚರಣೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾದ ಸೈನಿಕರನ್ನು ಗೌರವಿಸೋದೇ ಇಂದು ಭಾರತೀಯರ ಒಂದು ಸುಯೋಗ. ಅಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾಗವಹಿಸಕದ್ದ ದಕ್ಷಿಣಕನ್ನಡ ಜಿಲ್ಲೆಯ ಸಿಂದಗಿ ಕೆಮ್ಮಾಯಿಯ ಪದ್ಮನಾಭ ಗೌಡರನ್ನು ಗೌರವಿಸುವ ಕಾರ್ಯಕ್ರಮವೊಂದು ಪುತ್ತೂರಿನಲ್ಲಿ ನಡೆದಿದೆ. ಅತ್ಯಂತ ರಹಸ್ಯವಾಗಿ ಪ್ಲಾನ್ ಮಾಡಿ ಮಾಡಿದ ಕಾರ್ಯಾಚರಣೆಯ ಬಳಿಕ ಸೈನಿಕರಿಗೆ ಕೆಲವು ದಿನಗಳ ಆರಾಮವನ್ನು ನೀಡಲಾಗಿದ್ದು, ಇದೇ ರೀತಿ ಮನೆಗೆ ಬಂದ ಪದ್ಮನಾಭ ಗೌಡರಿಗೆ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಗೌರವ ಸಲ್ಲಿಸಲಾಗಿದೆ. ಪುತ್ತೂರಿನ ಪ್ರತಿಷ್ಠಿತ ಮನೆತನಕ್ಕೆ ಸೇರಿದ ಪದ್ಮನಾಭ ಗೌಡರ ಕುಟುಂಬದ ಮೂವರು ಸದಸ್ಯರು ಭಾರತೀಯ ಸೇನೆಯಲ್ಲಿ ದುಡಿದವರಾಗಿದ್ದು, ಎಳವೆಯಿಂದಲೇ ಭಾರತದ ಸೈನ್ಯದಲ್ಲಿ ಸೇರಬೇಕೆನ್ನುವ ಇಚ್ಛೆ ಪದ್ಮನಾಭ ಗೌಡರದ್ದಾಗಿತ್ತು. ತಮ್ಮ ಇಚ್ಛೆಯನ್ನು ಸುಮಾರು ೪೦ ವರ್ಷಗಳ ಹಿಂದೆಯೇ ಪೂರೈಸಿಕೊಂಡಿರುವ ಪದ್ಮನಾಭ ಗೌಡರು ಮುಂದೆಯೂ ದೇಶಕ್ಕಾಗಿ ದುಡಿಯಲು ಸಿದ್ಧವಾಗಿದ್ದಾರೆ.



