ಪಡೀಲ್‌ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿಗಾಗಿ ಸುಮಾರು ಏಳೆಂಟು ವರ್ಷಗಳ ಹಿಂದೆ ಅಲ್ಲಿದ್ದ ಸುಮಾರು 500ಕ್ಕೂ ಅಧಿಕ ಮರಗಳನ್ನು ತೆರವುಗೊಳಿಸಲಾಗಿತ್ತು. ಇದೀಗ ಪರಿಸರ ದಿನಾಚರಣೆಯ ಪ್ರಯುಕ್ತ ಜಿಲ್ಲೆಯ ಪರಿಸರಾಸಕ್ತ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಗಿಡ ನೆಡುವ ಪ್ರಸಕ್ತ ಸಾಲಿನ `ಹಸಿರು ಕ್ರಾಂತಿ’ ಅಭಿಯಾನಕ್ಕೆ ನೂತನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಲಾಗಿದೆ. 
ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಡಾ. ಆನಂದ್‌ರವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಈ ಸಂದರ್ಭ ಮಾತನಾಡಿದ ಅವರು, ಪರಿಸರಾಸಕ್ತರಾದ ಡಾ. ಸ್ಮಿತಾ ಹೆಗಡೆ ಅವರ ನೇತೃತ್ವದಲ್ಲಿ `ಅಮರ’ ಎಂಬ ಹೆಸರಿನಡಿ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಜಿಲ್ಲೆಯಲ್ಲಿ ಸೂಕ್ತ ಪ್ರದೇಶಗಳನ್ನು ಗುರುತಿಸಿ ಗಿಡ ನೆಟ್ಟು ಪೋಷಿಸುವ ಅಭಿಯಾನವನ್ನು ಹಮ್ಮಿಕೊಂಡಿವೆ. ಮಳೆಗಾಲ ಆರಂಭವಾಗಿದ್ದು, ಇದು ಗಿಡಗಳನ್ನು ನೆಡಲು ಸೂಕ್ತ ಹವಾಮಾನ ಎಂದವರು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಅರುಣ್ ಕುಮಾರ್, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.



