ಕುಂದಾಪುರ ತಾಲೂಕಿನ ಸಿದ್ದಾಪುರ, ಹೊಸಂಗಡಿ ಮತ್ತು ಕಮಲಶಿಲೆ ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಯೊಂದು ದಿನಪೂರ್ತಿ ಕಾಡಿನಲ್ಲಿ ಅವಿತುಕೊಂಡು ಸಂಜೆಯಾಗುತ್ತಿದ್ದ0ತೆ ಮುಖ್ಯರಸ್ತೆಗೆ ಬಂದು ಅಡ್ಡಾಡುತ್ತಿತ್ತು. ಇದರ ಪರಿಣಾಮವಾಗಿ ಕಳೆದ ಎರಡು ದಿನಗಳಿಂದ ಜನರಲ್ಲಿ ಆತಂಕ ಮನೆಮಾಡಿದ್ದು ,ತಾಲೂಕು ಆಡಳಿತ ಸುರಕ್ಷಾ ದೃಷ್ಟಿಯಿಂದ ಶಾಲೆಗಳಿಗೆ ರಜೆಯನ್ನು ಕೂಡ ಘೋಷಣೆ ಮಾಡಿತ್ತು.

ಬಾಳೆಬರೆ ಘಾಟಿಯಿಂದ ಇಳಿದು ಕಳೆದೆರಡು ದಿನಗಳಿಂದ ಕಾಡಿನಲ್ಲಿ ತಂಗಿರುವ ಈ ಒಂಟಿಸಲಗವನ್ನು ಸೆರೆ ಹಿಡಿಯಲು ಇದೀಗ ವನ್ಯಜೀವಿ ಇಲಾಖೆ ಕಾರ್ಯಾಚರಣೆ ಪ್ರಾರಂಭಿಸಿದೆ . ಸಿದ್ದಾಪುರ ಪರಿಸರದಲ್ಲಿ ಇತರೆ ಆನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸಲು ನಿರ್ಧರಿಸಿರುವ ಇಲಾಖೆ ಈಗಾಗಲೇ ಸಕ್ರೆಬೈಲಿನಿಂದ ಬಾಲಚಂದ್ರ,ಸೋಮಣ್ಣ ,ಮತ್ತು ಬಹದ್ದೂರು ಹೆಸರಿನ ಮೂರು ಆನೆಗಳನ್ನು ತರಿಸಿಕೊಂಡಿದೆ. ಸಂಜೆಯಾಗುತ್ತಿದ್ದ0ತೆ ಕಾಡು ಬಿಟ್ಟು ರೋಡಿಗೆ ಬರುವ ಆನೆಯನ್ನು ಸೆರೆ ಹಿಡಿಯಲು ಇಳಿಸಂಜೆ ಕಾರ್ಯಾಚರಣೆ ಪ್ರಾರಂಭಿಸುವ ಸಾಧ್ಯತೆಯಿದೆ. ರೇಡಿಯೋ ಕಾಲರ್ ನೀಡುವ ಮಾಹಿತಿಯನುಸಾರ ವನ್ಯಜೀವಿ ಇಲಾಖೆ ಕಾರ್ಯಾಚರಣೆ ಆರಂಭಿಸಲಿದೆ.



