ಹೈಟೆಕ್ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಮಾಡಿದ್ದರೂ ಸಾರ್ವಜನಿಕರ ಉಪಯೋಗಕ್ಕೆ ನೀಡದೆ, ಮೀನಾ ಮೇಷ ಎಣಿಸುತ್ತಿರುವ ಸರ್ಕಾರ ಹಾಗೂ ತಾಲೂಕು ಆಡಳಿತದ ನಿರ್ಲಕ್ಷ್ಯ ಧೋರಣೆ ಖಂಡಿಸಿ ದೇವರಾಜ ಅರಸು ಹೈಟೆಕ್ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಾದ ವಿಜಯ್ ಕುಮಾರ್ ರವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸತ್ಯಪ್ಪ ರವರು ಮಾತನಾಡಿ ಹುಣಸೂರು ತಾಲ್ಲೂಕು ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ರವರ ಕರ್ಮಭೂಮಿಯಾಗಿದ್ದು, ತಾಲ್ಲೂಕಿನಿಂದ ಆಯ್ಕೆಯಾದ ಸಿ.ಹೆಚ್. ವಿಜಯ್ ಶಂಕರ್ ರವರು ಮೇಘಾಲಯದ ಗೌರವಾನ್ವಿತ ರಾಜ್ಯಪಾಲರಾದರು. ಜಿ.ಟಿ. ದೇವೇಗೌಡ ರವರು ಸಚಿವರು, ಶಾಸಕರಾಗಿ, ಹೆಚ್.ಪಿ. ಮಂಜುನಾಥ್ ರವರು 3 ಬಾರಿ ಶಾಸಕರಾಗಿ ಆಯ್ಕೆಯಾಗಿ, ಹಾಲಿ ಶಾಸಕರಾದ ಜಿ.ಡಿ ಹರೀಶ್ ಗೌಡ ರವರು 2 ವರ್ಷ ಪೂರೈಸಿದ್ದು, ಡಿ. ತಿಮ್ಮಯ್ಯ ರವರು, ಹೆಚ್. ವಿಶ್ವನಾಥ್ ರವರು, ಮಧು ಮಾದೇಗೌಡ ರವರು, ಮಂಜೇಗೌಡ ಇವರೆಲ್ಲರೂ ಹುಣಸೂರನ್ನು ಪ್ರತಿನಿಧಿಸಿದ್ದರೂ ಸಹ ನಗರದಲ್ಲಿ 37 ಕೋಟಿಗಳ ವೆಚ್ಚದಲ್ಲಿ ನಿರ್ಮಾಣಗೊಂಡು ಕಳೆದ 6 ತಿಂಗಳಿ0ದ ಅಗತ್ಯ ಸಲಕರಣೆಗಳಿಗೆ ಟೆಂಡರ್ ಕರೆಯದೆ ವಿಳಂಬ ಮಾಡಿ, ಆಸ್ಪತ್ರೆಯನ್ನು ಪಾಳುಕೊಂಪೆಗೆ ಸೇರಿಸುತ್ತಿರುವುದು ಹಾಗೂ ಯಾರಿಗೂ ಆಸ್ಪತ್ರೆ ಶೀಘ್ರ ಉದ್ಘಾಟನೆಯಾಗಲಿ ಎಂಬ ಇಚ್ಛಾ ಶಕ್ತಿ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ.

ಕೂಡಲೇ ಹೈಟೆಕ್ ಆಸ್ಪತ್ರೆ ಉದ್ಘಾಟನೆಗೊಳ್ಳುವುದರೊಂದಿಗೆ, ಅರಸು ಭವನವು 9.50 ಕೋಟಿ ಅನುದಾನದಿಂದ ನಿರ್ಮಾಣಗೊಂಡಿದ್ದು ಈ ಭವನದ ಕಾಮಗಾರಿ ಸಹ ಪೂರ್ಣಗೊಳಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಆದಷ್ಟು ಶೀಘ್ರವಾಗಿ ಸಾರ್ವಜನಿಕರ ಬಳಕೆಗೆ ಕಲ್ಪಿಸಬೇಕು. ಹನಗೋಡು ಹೋಬಳಿ ಕಾಡಂಚಿನಲ್ಲಿ ಹಾಡಿಯ ಬಡ ಜನರು ವಾಸಿಸುತ್ತಿದ್ದು, ಇಲ್ಲಿರುವ ಅಂಬುಲೆನ್ಸ್ ರಿಪೇರಿಗೆ ಕಳೆದ ಒಂದೂವರೆ ವರ್ಷಗಳ ಹಿಂದೆ ಹೋಗಿದ್ದು, ರಿಪೇರಿಯಾದರೂ ಇಲ್ಲಿಗೆ ಬಂದಿರುವುದಿಲ್ಲ. ಇತ್ತೀಚೆಗೆ ಹುಲಿ ಧಾಳಿಯಿಂದ ಯುವಕ ಮೃತಪಟ್ಟಿದ್ದು, ಅಂಬುಲೆನ್ಸ್ ಸೇವೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಹಾಗೂ ರತ್ನಪುರಿಯಲ್ಲಿ ಅಂಬುಲೆನ್ಸ್ ಸೇವೆ ಇಲ್ಲದೆ ಸಾರ್ವಜನಿಕರು ತೊಂದರೆಪಡುತ್ತಿದ್ದಾರೆ. ಆದ್ದರಿಂದ ಆರೋಗ್ಯ ಇಲಾಖೆಯವರು ಆದಷ್ಟು ಶೀಘ್ರವಾಗಿ ಅಂಬುಲೆನ್ಸ್ ಸೇವೆ ಒದಗಿಸಿಕೊಡಬೇಕು.

ಹುಣಸೂರು ನಗರದಲ್ಲಿ ಬಿ. ಖಾತಾ ಅಭಿಯಾನ ಕೈಗೊಂಡು ನಗರಸಭೆಯಲ್ಲಿ ಬಿ ಖಾತಾ ಮಾಡಲು ಈಗಾಗಲೇ ಸಾವಿರಾರು ಮಂದಿಯಿ0ದ 6 ವರ್ಷಗಳ ಡಬ್ಬಲ್ ಕಂದಾಯ ಕಟ್ಟಿಸಿಕೊಂಡಿರುತ್ತಾರೆ. ಇವರುಗಳಿಗೆ ಕಂದಾಯ ಮರುಪಾವತಿಸಬೇಕು, ತಪ್ಪಿದಲ್ಲಿ ಮುಂದಿನ ಸಾಲಿನ ಕಂದಾಯ ಮೊತ್ತವೆಂದು ಈ ಮೊತ್ತವನ್ನು ಜಮಾ ಮಾಡಿಕೊಳ್ಳಬೇಕು. ಮೈಸೂರು, ಹುಣಸೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಜಡಗನಕೊಪ್ಪಲು ಗೇಟ್ ಹತ್ತಿರ ಸಾರ್ವಜನಿಕರ ಅನುಕೂಲಕ್ಕಾಗಿ ನೂತನವಾಗಿ ನಿರ್ಮಿಸಲಾಗಿದ್ದ ಬಸ್ ನಿಲ್ದಾಣವನ್ನು ನೆಲಸಮ ಮಾಡಿರುವ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರ ಮೇಲೆ ಕ್ರಮ ಕೈಗೊಂಡು ಮತ್ತೆ ಇದೇ ಸ್ಥಳದಲ್ಲಿ ನೂತನವಾಗಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು.

ನಗರಸಭೆಯ ನಗರೋತ್ಥಾನ ಯೋಜನೆಯಡಿ ಜಲಜೀವನ್ ಕಾಮಗಾರಿ ವಾರ್ಡ್ ನಂಬರ್ 20 ರಲ್ಲಿ ಅಧ್ವಾನ ಯೋಜನೆಯಡಿ, ಕುಡಿಯುವ ನೀರು ಸಂಪರ್ಕ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು. ಹುಣಸೂರು ನಗರಸಭೆ ಮೇಲ್ದರ್ಜೆಗೇರಿದ್ದರೂ ಹುಣಸೂರಿನ ಪ್ರಮುಖ ರಸ್ತೆಗಳು ಗುಂಡಿಮಯವಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಜನಪ್ರತಿನಿಧಿಗಳು, ನಗರಸಭಾ ಆಯುಕ್ತರು, ಅಧ್ಯಕ್ಷರು, ಸದಸ್ಯರುಗಳು, ಸಂಬAಧಪಟ್ಟ ರಸ್ತೆ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಗುಂಡಿ ಬಿದ್ದಿರುವ ರಸ್ತೆಗಳನ್ನು ದುರಸ್ಥಿ ಪಡಿಸಬೇಕು.

ಗೋವಿಂದನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವಿನಾಯಕನಗರ ಬಡಾವಣೆಯಲ್ಲಿ ಸೈನಿಕರು ವನ್ಯಜೀವಿ ವೈದ್ಯಾಧಿಕಾರಿಗಳು ವಾಸವಾಗಿದ್ದು ಪಂಚಾಯಿತಿಯಿ0ದ ಕುಡಿಯುವ ನೀರು ಸೌಲಭ್ಯವನ್ನು ಕಲ್ಪಿಸಿ ಕೊಟ್ಟಿಲ್ಲ. ಕೂಡಲೇ ಕಲ್ಪಿಸಿಕೊಡಬೇಕು ಎಂದರು. ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿಗಳಾದ ವಿಜಯ್ ಕುಮಾರ್ ರವರು ಮಾತನಾಡಿ ಸತ್ಯಪ್ಪ ರವರು ಹಲವು ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಹುಣಸೂರಿಗೆ ಬರುತ್ತಿದ್ದು ಅವರ ಗಮನಕ್ಕೆ ತಂದು ತುರ್ತಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಉಪವಿಭಾಗಾಧಿಕಾರಿಗಳ ಕಛೇರಿಯ ಯದುಗಿರೀಶ್ ರವರು ಸಹ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತಿ ಸಿ.ಟಿ. ಆರ್ ಐ ತಾಂತ್ರಿಕ ಅಧಿಕಾರಿ ಎಂ. ಶಂಭುಗೌಡ, ರೈತ ಮುಖಂಡರಾದ ಎಂ. ಕೃಷ್ಣೇಗೌಡ, ಬಸಪ್ಪ ಹಂದನಹಳ್ಳಿ, ಪುರುಸೋತ್ತಮರಾವ್ ಸಾಳುಂಕೆ, ತಾಲ್ಲೂಕು ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ನಾಗಪ್ಪಶೆಟ್ಟಿ, ಗೊಂದಳಿ ಸಮಾಜದ ಅಧ್ಯಕ್ಷರಾದ ಆನಂದ, ರಾಕೇಶ್ ರಾವ್, ಗ್ರಾಮ ಪಂಚಾಯ್ತಿ ಸದಸ್ಯರಾದ ಕುಮಾರ್, ಶಿವಶೇಖರ, ಚಂದ್ರೇಗೌಡ, ಸ್ಟಾಲಿನ್, ದೇವರಾಜೇಗೌಡ, ಹೇಮಚಂದ್ರೇಗೌಡ, ಸೋಮಶೇಖರ, ಚಿಕ್ಕನಂಜಯ್ಯ, ಪ್ರಕಾಶ್, ವಿಜಯಲಕ್ಷ್ಮಿ, ಪವಿತ್ರಾ, ಶೋಭಾ, ಸವಿತಾ, ಲಕ್ಷ್ಮಮ್ಮ, ರುದ್ರಮ್ಮ ಮುಂತಾದ ನೂರಾರು ಮಂದಿ ಹಾಜರಿದ್ದರು.



