ಕದ್ರಿ ಮಂಜುನಾಥೇಶ್ವರನ ದೇವಾಲಯದ ಕೆರೆಯಲ್ಲಿ ಅಪೂರ್ವ ಬುದ್ದನ ಶಿಲ್ಪ ಪತ್ತೆಯಾಗಿದೆ. ರುಂಡವಿಲ್ಲದ ಪದ್ಮಾಸನ ಭಂಗಿಯಲ್ಲಿರುವ ಬುದ್ದನ ವಿಗ್ರಹದ ಬಗ್ಗೆಗಿನ ವರದಿಯೊಂದು ಇಲ್ಲಿದೆ.

ಮಂಗಳೂರು ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಕೆರೆಯೊಂದರಲ್ಲಿ ಪುರಾತತ್ವ ಅಧ್ಯಯನದ ವೇಳೆ ಐತಿಹಾಸಿಕ ಬುದ್ಧನ ಶಿಲ್ಪವೊಂದು ಪತ್ತೆಯಾಗಿದೆ. ನೀರಿನಲ್ಲಿ ವಿಸರ್ಜನೆ ಮಾಡಿರುವ ರೀತಿ ಪತ್ತೆಯಾಗಿರುವ ಈ ಬುದ್ಧನ ಪ್ರತಿಮೆಯ ತಲೆಯಭಾಗ ಸಂಪೂರ್ಣವಾಗಿ ಕಾಣೆಯಾಗಿದೆ, ಇನ್ನು ಬಲಗೈ ಸಂಪೂರ್ಣವಾಗಿ ತುಂಡಾಗಿದ್ದು, ಎಡಗೈ ಪದ್ಮಾಸನದಲ್ಲಿ ಕುಳಿತ ಎರಡು ಕಾಲುಗಳು ನಡುವೆ ಹರಿಬಿಟ್ಟಂತ್ತಿದೆ. ಈ ಬಗ್ಗೆ ಶಿರ್ವ ಡಾ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಮಾಹಿತಿ ನೀಡಿದ್ದಾರೆ. ದೇವಸ್ಥಾನದ ಆಡಳಿತಾಧಿಕಾರಿಗಳ ಅನುಮತಿಯೊಂದಿಗೆ ಪ್ರತಿಮೆಯನ್ನು ನೀರಿನಿಂದ ಮೇಲಕ್ಕೆತ್ತಿ ಅಧ್ಯಯನ ನಡೆಸಲಾಗಿದೆ. ಈ ಬುದ್ಧನ ಶಿಲ್ಪವು ಕದ್ರಿಯ ಪ್ರಾಚೀನ ಬೌದ್ಧ ಇತಿಹಾಸದ ಕುರುಹುಗಳನ್ನು ಸೂಚಿಸುತ್ತದೆ .

ಶಿಲ್ಪವೂ ಬಹುತೇಕ ಗೋವಾದ ಮೊಶಿರೋ ಮಾಡೋದಲ್ಲಿ ದೊರೆತ ಬುದ್ಧನ ಶಿಲ್ಪವನ್ನೇ ಹೋಲುವುದರಿಂದ ಇದು ನಾಲ್ಕು ಅಥವಾ ಐದನೇ ಶತಮಾನಕ್ಕೆ ಸೇರಿದ್ದು ಎಂದು ಅಂದಾಜಿಸಲಾಗಿದೆ. ಕದ್ರಿಯ ಪ್ರಾಚೀನ ಇತಿಹಾಸವನ್ನೊಮ್ಮೆ ಬಿಡಿಸಿ ನೋಡಿದಾಗ ಅದೊಂದು ಪ್ರಮುಖ ಭೌದ್ಧ ಕೇಂದ್ರವಾಗಿತ್ತೆ0ದು ತಿಳಿದು ಬರುತ್ತದೆ. ಇದನ್ನು ಬೆಂಬಲಿಸುವ ಸಾಕಷ್ಟು ದಾಖಲೆಗಳು ಕದ್ರಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ದೊರೆಯುತ್ತದೆ. ಉತ್ತರ ಭಾರತದಿಂದ ವಲಸೆ ಬಂದಿದ್ದ ಭೌದ್ಧ ಸನ್ಯಾಸಿಗಳು ಕದ್ರಿಯಲ್ಲಿ ನೆಲೆಸಿದ್ದರು . ಆಗೆಲ್ಲಾ ಇದನ್ನು “ಕದರಿಕ ವಿಹಾರ” ಎಂದು ಕರೆಯಲಾಗುತ್ತಿತ್ತಂತೆ. ಕದ್ರಿಯಲ್ಲಿ ನೆಲೆಸಿದ್ದ ಪ್ರಾಚೀನ ಬೌದ್ಧ ಧರ್ಮದ ಪ್ರಭಾವ ಎಷ್ಟಿತ್ತೆಂದರೆ ಬಹುತೇಕರು ಇಂದಿಗೂ ಕೂಡ ಕದ್ರಿಯನ್ನು ತುಳುನಾಡಿನ ಬೌದ್ದ ಧರ್ಮದ ಸಂಕೇತ ಎಂದು ಕರೆಯುತ್ತಾರೆ. ಇದೀಗ ಸಿಕ್ಕಿರುವ ಈ ಅಪೂರ್ವ ಬುದ್ಧನ ಶಿಲ್ಪವು ಕೂಡ ಕದ್ರಿಯಲ್ಲಿ ಪ್ರಾಚೀನ ಬೌದ್ಧ ಧರ್ಮ ನೆಲೆಸಿದ್ದ ಬಗ್ಗೆ ಸ್ಪಷ್ಟಪಡಿಸುತ್ತದೆ. ಹತ್ತನೇ ಶತಮಾನದ ನಂತರ ಕದ್ರಿಯಲ್ಲಿ ಬೌದ್ಧ ಧರ್ಮದ ಪ್ರಭಾವು ಕ್ರಮೇಣ ಕಡಿಮೆಯಾಗಿ ನಾಥ ಪಂಥವು ಆರಂಭವಾಯಿತು. ಶಿವನನ್ನು ಆರಾಧ್ಯ ದೈವವೆಂದು ಬಲವಾಗಿದ್ದ ನಂಬಿದ್ದ ನಾಥಪಂಥದ ಪರಿಣಾಮವಾಗಿ ಕದ್ರಿಯಲ್ಲಿ ಪರಶಿವನ ಆರಾಧನೆ ಪ್ರಾರಂಭಿವಾಯಿತು ಎಂಬ ಉಲ್ಲೇಖಗಳೂ ಕೂಡ ಇವೆ .

ರುಂಡವಿಲ್ಲದ ಈ ಪ್ರತಿಮೆಯನ್ನು ಬುದ್ಧನ ಶಿಲ್ಪವೆಂದು ಹೇಗೆ ಹೇಳಲಾಗಿದೆ ಎಂಬುದು ಎಲ್ಲರಲ್ಲೂ ಮೂಡಬಹುದಾದ ಸಾಮಾನ್ಯ ಸಂಶಯ. ಈ ಸಂಶಯಕ್ಕೆ ಉತ್ತರವೆಂಬ0ತೆ ದೇವಾಲಯದ ಹೊರ ಆವರಣದಲ್ಲಿ ಸ್ಥಂಭ ಕೆಳಗಿನ ಫಲಕಗಳಲ್ಲಿ ಪದ್ಮಪೀಠದ ಮೇಲೆ ಕುಳಿತ ಧ್ಯಾನಿ ಬುದ್ಧರ ಶಿಲ್ಪಗಳು ಕಣ್ಣ ಮುಂದೆ ಬರುತ್ತದೆ. ಅವುಗಳ ಆಧಾರದ ಮೇಲೆ ಸಿಕ್ಕಿರುವುದು ಬುದ್ಧನ ವಿಗ್ರಹ ಎಂಬುದನ್ನು ಪುರಾತತ್ವ ಶೋಧಕರು ದೃಢಪಡಿಸುತ್ತಾರೆ. ಶಿಲ್ಪವು ಸುಮಾರು 68 ಸೆ . ಮೀ ಎತ್ತರವಾಗಿದ್ದು 48 ಸೆ.ಮೀ ಅಗಲವಾಗಿದೆ ಎಂದು ಪುರಾತತ್ವ ಅನ್ವೇಷಣೆ ತಂಡ ಮಾಹಿತಿ ನೀಡಿದೆ. ಬುದ್ಧನ ಶಿಲ್ಪದ ಹೊರತಾಗಿ ಕೆಲವು ಗುಹೆ ಸಮುಚ್ಚಯಗಳು ಕೂಡ ದೊರೆತಿದ್ದು ಕದ್ರಿಯಲ್ಲಿ ಈಗಿರುವ ಮೂರೂ ಗುಹೆಗಳ ಪ್ರಾಚೀನ ಇತಿಹಾಸದ ಬಗ್ಗೆ ಕುತೂಹಲ ಹುಟ್ಟಿಸುತ್ತದೆ. ಕದ್ರಿಯ ಕೆರೆಗಳ ಮೇಲ್ಭಾಗದಲ್ಲಿ ಗುಡ್ಡ ಪ್ರದೇಶದಲ್ಲಿ ಮೂರೂ ಗುಹೆಗಳಿದ್ದು ಅವುಗಳನ್ನು ಕೆಂಪು ಮುರಕಲ್ಲು ಕೊರೆದು ನಿರ್ಮಿಸಲಾಗಿದೆ ಎಂದು ತಿಳಿದುಬರುತ್ತದೆ .

ಈ ಅನ್ವೇಷಣೆಯಲ್ಲಿ ವಿಶೇಷವಾಗಿ ಮಣಿಪಾಲ್ ವಿಶ್ವವಿದ್ಯಾಲಯದ ಪಿಎಚ್ ಡಿ ವಿದ್ಯಾರ್ಥಿ ಶ್ರೇಯಸ್ ಕೊಳಪೆ ,ಶಿರ್ವ ಎಂಎಸ್ ಆರ್ ಎಸ್ ಕಾಲೇಜಿನ ಪುರಾತತ್ವ ವಿಭಾಗದ ಉಪನ್ಯಾಸಕರಾದ ಶ್ರೇಯಸ್ ಬಂಟಕಲ್ಲು ,ಅದೇ ಕಾಲೇಜಿನ ಪುರಾತತ್ವ ವಿಭಾಗದ ವಿದ್ಯಾರ್ಥಿ ರವೀಂದ್ರ ಕುಶ್ವಾ ,ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತರ ವಿಭಾಗದ ವಿದ್ಯಾರ್ಥಿ ಕಾರ್ತಿಕ್ ಭಾಗಿಯಾಗಿದ್ದಾರೆ .



