ಬಹುಷಃ ಬಾಲ್ಯವಸ್ಥೆಯಲ್ಲಿ ಹತ್ತರಿಂದ ಹನ್ನೆರಡು ವರ್ಷ ನಾನು ನಿನ್ನನ್ನು ಪ್ರೀತಿಸಿದಷ್ಟು, ಹಚ್ಚಿಕೊಂಡಷ್ಟು, ಮೆಚ್ಚಿಕೊಂಡಷ್ಟು ಜಗತ್ತಿನ ಬೇರಾವುದೇ ವಸ್ತು ಅಥವಾ ವ್ಯಕ್ತಿಗಳನ್ನು ಹಚ್ಚಿಕೊಂಡಿರಲಿಕ್ಕಿಲ್ಲ. ಆಗೆಲ್ಲ ನೀನೇ ಸರ್ವಸ್ವ, ನಿನ್ನ ಮಾತೇ ನನಗೆ ವೇದ ವಾಕ್ಯ. ಕನ್ನಿಷ್ಠ ನಾಲ್ಕನೇ ಕ್ಲಾಸ್ ಓದಿದ ನೀನೇ ಎನಗೆ ಟೀಚರ್, ಮೋಟಿವೇಟರ್ ಹೀಗೆ ಎಲ್ಲವೂ ಆಗಿದ್ದೆ. ನಿನ್ನನ್ನು ಆಗೆಲ್ಲ ಅಷ್ಟು ಹಚ್ಚಿಕೊಳ್ಳಲು ಕಾರಣವೇನೆಂದು ಈಗೊಮ್ಮೆ ಕೂತು ಯೋಚಿಸಿದರೆ,ಬಹುಷಃ ಆಗಿನ್ನೂ ನನ್ನಲ್ಲಿ ಮುಗ್ಧತೆಯಿತ್ತು, ಒಳ್ಳೆಯತನವಿತ್ತು ಅಷ್ಟೇ ಅಲ್ಲ ಜಗತ್ತಿನ ಬೇರಾವುದೇ ಕೆಟ್ಟ ವಿಚಾರಗಳು ನನ್ನ ತಲೆಗೆ ಹೊಕ್ಕಿರಲಿಲ್ಲ. ನೀನು ಕಟ್ಟಿಕೊಟ್ಟ ಸುಂದರ ಪ್ರಪಂಚದಲ್ಲಿ ಬದುಕು ನಿರಾಳವಾಗಿತ್ತು, ಸುಂದರವಾಗಿತ್ತು.

ವಯಸ್ಸು ಹದಿನಾಕರ ಗಡಿ ದಾಟಿ, ಪ್ರೌಢಾವಸ್ಥೆಯ ಹೊಸ್ತಿಲಿಗೆ ಬಂದ ಮೇಲೆಯೇ ಪ್ರೀತಿಯ ನೀನು ಕೆಟ್ಟವಳಾಗಿ ಕಂಡಿದ್ದು, ನಿನ್ನ ಮಾತುಗಳೆಲ್ಲ ಕಿರಿ ಕಿರಿ ಅನ್ನಿಸತೊಡಗಿದ್ದು. ಅದ್ಯಾವ ಮಟ್ಟಿಗೆ ಜಗತ್ತಿನ ಬೇರೆ ವಿಚಾರಗಳು ನನ್ನನ್ನು ಆವರಿಸಿತ್ತು ಎಂದರೆ ಸುಮಾರು ಬಾರಿ ನಿನ್ನ ಕಾಳಜಿಯು ಕೂಡ ನನಗೆ ಕೋಪ ತರಿಸುತಿತ್ತು. ಪ್ರತಿ ಮಾತಿಗೂ ಎದುರುತ್ತರ ಕೊಡುವುದು, ಪ್ರತಿ ವಿಷಯದಲ್ಲೂ ನಿನ್ನನ್ನು ಗದರುವುದು, ನಿನ್ನ ಆಜ್ಞೆಗಳನ್ನು ತಲ್ಲಿಹಾಕುವುದು ಹೀಗೆ ಎಲ್ಲವನ್ನು ದಿನನಿತ್ಯ ಮಾಡುತ್ತಲೇ ಬಂದೆ. ಬಹುಷಃ ಬಾಲ್ಯದ ಮೊದಲ ಹನ್ನೆರಡು ವರ್ಷದಲ್ಲಿ ನೀನು ನನ್ನನ್ನು ಬೆಳೆಸಿದ ಲೋಕವನ್ನು ತೊರೆದು ನಿಜ ಜಗತ್ತಿಗೆ ಕಾಲಿಟ್ಟಾಗಲೇ ನನ್ನಲ್ಲಿನ ಮುಗ್ಧತೆ ಕಮರಿತು, ಒಳ್ಳೆಯತನವೆಂಬುದು ನನ್ನನ್ನು ಬಿಟ್ಟು ದೂರ ಸರಿದಿತ್ತು. ಅಮ್ಮನೆಂಬ ನಿರಾಳ ಲೋಕವನ್ನು ತೊರೆದು ಬಾಹ್ಯ ಜಗತ್ತಿನ ಖುಷಿಗಳಲ್ಲಿ ಮುಳುಗಿದ್ದ ನನಗೆ ನಿನ್ನ ಪ್ರೀತಿ, ಕಾಳಜಿಯ ಕುರಿತು ಮನವರಿಕೆ ಆಗುವ ಪ್ರಸಂಗವೂ ಕೂಡ ಒಂದು ಬಾರಿ ಒದಗಿ ಬಂದಿತ್ತು. ಆಗ ಬಹುಷಃ ನಾನು ಸೆಕೆಂಡ್ ಪಿಯುಸಿ ಓದ್ದುತ್ತಿದ್ದೆ. ಒಂದು ಬಾರಿ ಕಾಲೇಜಿನಲ್ಲಿ ಹೈ ಜಂಪ್ ಪ್ರಾಕ್ಟೀಸ್ ಮಾಡುವ ಸಂಧರ್ಭದಲ್ಲಿ ನನ್ನ ಎಡ ಗೈ ಮೂಳೆ ಮತ್ತು ಎಡಗಾಲಿನ ಮೂಳೆ ಮುರಿದು ಮೂರು ತಿಂಗಳು ಹಾಸಿಗೆ ಹಿಡಿಯಬೇಕಾಯಿತು. ಆಗಲೇ ನನಗೆ ನೀನು ಮತ್ತೆ ಒಳ್ಳೆಯವಳಾಗಿ ಕಂಡಿದ್ದು. ಆ ಸಮಯದಲ್ಲಿ ನೀನು ನನ್ನನ್ನು ಆರೈಕೆ ಮಾಡಿದ ರೀತಿ, ನೋಡಿಕೊಂಡ ಬಗೆ ನಿಜಕ್ಕೂ ನಿನ್ನ ಮೇಲಿನ ಗೌರವವನ್ನು ದುಪ್ಪಟ್ಟುಗೊಳಿಸಿತ್ತು. ಈ ಹಿಂದೆ ಅದೆಷ್ಟೇ ಬಾರಿ ನಾನು ಗದರಿದರೂ, ನಿನ್ನನ್ನು ನಿರಾಕರಿಸಿದರೂ, ದ್ವೇಷಿಸಿದರೂ ನಿನ್ನೊಳಗಿನ ಅಮ್ಮ ಮಾತ್ರ ಅಮ್ಮನಾಗಿಯೇ ಉಳಿದಿದ್ದಳು. ನನ್ನ ಆರೈಕೆಯಲ್ಲಿ ನಿನಗೆ ಕಿರಿ ಕಿರಿ ಎನ್ನುವ ಭಾವನೆಯಿರಲಿಲ್ಲ, ನಾನ್ಯಾಕೆ ಇವನ ಸೇವೆ ಮಾಡಬೇಕೆಂಬ ಮೊಂಡುತನವಿರಲಿಲ್ಲ ಎಲ್ಲದಕ್ಕಿಂತ ಮಿಗಿಲಾಗಿ ಅಲ್ಲಿ ಯಾವುದೇ ಸ್ವಾರ್ಥವಿರಲಿಲ್ಲ.

ನೀನು ನನ್ನನ್ನು ಆರೈಸಿದ ಪ್ರತಿ ಕ್ಷಣವೂ ಕೂಡ ಈ ಹಿಂದೆ ನಿನಗೆ ಗದರಿದ ತಪ್ಪಿಗೆ ನನ್ನ ಮನಸು ಕ್ಷಮೆ ಕೇಳುತ್ತಲೇ ಇತ್ತು. ಕ್ಷಮಿಸಿಬಿಡು ಅಮ್ಮ, ಅದೆಷ್ಟೋ ಬಾರಿ ನೀನು ಕಾಳಜಿಯಿಂದ ಊಟ ಕೊಟ್ಟಾಗ ನಿರಾಕರಿಸಿ ಗದರಿದ್ದಕ್ಕೆ. ಕ್ಷಮಿಸಿಬಿಡು ಅಮ್ಮ, ನಿನ್ನ ಪ್ರೀತಿಯೆಲ್ಲವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಕ್ಕೆ. ಕ್ಷಮಿಸಿಬಿಡು ಅಮ್ಮ, ಸಣ್ಣ ಸಣ್ಣ ವಿಷಯಕ್ಕೂ ನಿನ್ನ ಮೇಲೆ ಅತಿಯಾಗಿ ರೇಗಿದ್ದಕ್ಕೆ. ಕ್ಷಮಿಸಿಬಿಡು ಅಮ್ಮ, ನಿನ್ನ ಶ್ರೇಷ್ಟತೆ ಮರೆತು ನಿನ್ನ ದೂಷಿಸಿದ ತಪ್ಪಿಗೆ. ಕ್ಷಮಿಸಿ ಬಿಡು ಅಮ್ಮ, ನಿನ್ನಂತವಳ ಮಗನಾಗಿ ಇಷ್ಟು ಕೆಟ್ಟವನಾಗಿದ್ದಕ್ಕೆ, ಎಂದೆಲ್ಲಾ ಆ ಇಡೀ ತಿಂಗಳು ನನ್ನ ಡೈರಿಯಲ್ಲಿ ನಿನ್ನ ವಿಚಾರದಲ್ಲಿ ನಾನು ಮಾಡಿದ ತಪ್ಪಿನ ಪ್ರಾಯಶ್ಚಿತಕ್ಕಾಗಿ ಬರೆದಿದ್ದೆ. ಬಹುಷಃ ಕಡೆಗೂ ನಿನ್ನ ಬಳಿ ನೇರವಾಗಿ ಕ್ಷಮೆ ಕೇಳುವ ಧೈರ್ಯ ಬರಲೇ ಇಲ್ಲ. ಹಾಗೆ ಅಂದುಕೊAಡು ನಿನ್ನ ಮುಂದೆ ನಿಂತಾಗಲೆಲ್ಲ “ಇರ್ಲಿ ಮಗ, ನೀನ್ ಅಲ್ವಾ!!” ಅಂತ ನಿನ್ನ ಕಣ್ಣುಗಳೇ ನನ್ನ ಕ್ಷಮೆಯನ್ನ ದೊಡ್ಡ ಮನಸಿನಿಂದ ನಿರಾಕರಿಸುತಿತ್ತು.

ಅಮ್ಮ ಎಂದರೆ ಸರ್ವಸ್ವ ಎಂಬ ಭಾವನೆ ನಮ್ಮಲ್ಲಿ ಇಲ್ಲದೇ ಹೋದರು ಆಕೆಗೆ ನೋವು ಕೊಡದಿರಿ. ಬದುಕಿನ ನಾನಾ ಹಂತಗಳಲ್ಲಿ ಜಂಜಾಟಗಳ ನಡುವೆ ನಮಗೆ ಅಮ್ಮ ಕಿರಿ ಕಿರಿ ಅನ್ನಿಸಬಹುದೇ ಹೊರತು ಅವಳಿಗೆ ನಾವೆಂದು ಕಿರಿ ಕಿರಿ ಅನ್ನಿಸಲು ಸಾಧ್ಯವೇ ಇಲ್ಲ. ಈ ಘಟನೆಯ ಬಳಿಕ ನಾನು ಅರಿತಿದ್ದು ಇಷ್ಟು, “ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ಅಮ್ಮಂದಿರಿಲ್ಲ ಜಗದೊಳು “..!!
ಬರವಣಿಗೆ: ಚೇತನ್ ಕಾಶಿಪಟ್ನ



