ಮೂಡುಬಿದ್ರೆಯ ಪ್ರತಿಭಾ ಎಸ್ ರೈ ಮತ್ತು ಶಿವರಾಜ್ ರೈ ಅವರ ಪುತ್ರಿ ರಿಷಿತಾ ರೈ ಮೂಡಬಿದ್ರೆ ತನ್ನ ಕಿರಿವಯಸ್ಸನಲ್ಲಿಯೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಬಾಲಸಾಧಕಿ ಎನಿಸಿಕೊಂಡಿದ್ದಾರೆ. ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾಬೀತುಪಡಿಸಿರುವ ರಿಷಿತಾ ಶೈಕ್ಷಣಿಕ ಚಟುವಟಿಕೆ, ಕ್ರೀಡೆ, ಚಿತ್ರಕಲೆ, ಭಕ್ತಿಗೀತೆ ಹೀಗೆ ಹಲವು ಕ್ಷೇತ್ರದಲ್ಲಿ ಮಾಗಿದ ಪ್ರತಿಭೆಯಾಗಿದ್ದಾರೆ.

ಪ್ರಸ್ತುತ ದಿಗಂಬರ ಜೈನ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿರುವ ಇವರು ವಾಯ್ಸ್ ಆಫ್ ಆರಾಧನಾ ತಂಡದ ಸಕ್ರಿಯ ಸದಸ್ಯರಾಗಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಆಸಕ್ತಿಯ ಕ್ಷೇತ್ರಗಳ ಜೊತೆಗೆ ಓದಿನಲ್ಲೂ ಮುಂದಿರುವ ರಿಷಿತಾ ತಾಲೂಕು ಮಟ್ಟದ ಅಬಾಕಸ್ ಜೂನಿಯರ್ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು ಕರುನಾಡ ಕನ್ನಡ ಪ್ರತಿಭಾ ಪರೀಕ್ಷೆಯಲ್ಲೂ ಭಾಗವಹಿಸಿರುತ್ತಾರೆ. ಕ್ರೀಡೆಗೂ ಸೈ ಎಂದಿರುವ ಈ ಬಾಲಪ್ರತಿಭೆ ತಾಲ್ಲೂಕು ಮಟ್ಟದ ಕರಾಟೆಯಲ್ಲಿ ತೃತೀಯ ಮತ್ತು ವಲಯಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಇನ್ನು ಭಾರತ್ ಸ್ಕೌಟ್ ಗೈಡ್ಸ್ ನ ಜಿಲ್ಲಾ ಮಟ್ಟದ ರ್ಯಾಲಿಯಲ್ಲೂ ಪಾಲ್ಗೊಂಡು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದಲ್ಲದೆ ಕುಣಿತಭಜನೆ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ತನ್ನ ಛಾಪು ಮೂಡಿಸಿರುವ ರಿಷಿತ ರೈ ಅವರ ಅದ್ಭುತ ಚಿತ್ರಕಲಾ ಕೌಶಲ್ಯಕ್ಕೂ ಹತ್ತು ಹಲವಾರು ಪ್ರಶಸ್ತಿಗಳು ಸಂದಿವೆ. ಇವುಗಳ ಜೊತೆಗೆ ಭರತನಾಟ್ಯ ಮತ್ತು ಸಂಗೀತವನ್ನು ಕೂಡ ಅಭ್ಯಾಸ ಮಾಡುತ್ತಿರುವ ರಿಷಿತ ರೈ ಗೆ ಲಗ್ಗೆಯಿಟ್ಟ ಕ್ಷೇತ್ರದಲ್ಲೆಲ್ಲ ಛಾಪು ಮೂಡಿಸಿರುವ ಕೀರ್ತಿ ಸಲ್ಲುತ್ತದೆ.



