ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ ಹಾಗೂ ಅವರ ಇಬ್ಬರು ಸಹಚರರ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಣಂಬೂರಿನ ಎನ್.ಎಂ.ಪಿ.ಎ. ಕಾರ್ಯದರ್ಶಿ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂ.9ರಂದು ರಾತ್ರಿ 8 ಗಂಟೆ ಸುಮಾರಿಗೆ ಮಾಜಿ ಶಾಸಕ ಮೊಯ್ದಿನ್ ಬಾವಾ ಮತ್ತು ಅವರ ಇಬ್ಬರು ಸಹಚರರು ಕಾಮಗಾರಿಯ ಬಿಲ್ ಮಂಜೂರಾತಿ ವಿಚಾರವಾಗಿ ಎನ್.ಎಂ.ಪಿ.ಎ. ಕಚೇರಿಯ ಉಪಾಧ್ಯಕ್ಷರ ಕಚೇರಿಗೆ ನುಗ್ಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಅವರನ್ನು ಕಚೇರಿಯಿಂದ ಹೊರಗೆ ಹೋಗದಂತೆ ತಡೆದಿದ್ದಾರೆ. ಬಳಿಕ ಹೊರ ಹೋದಾಗ ಹಿಂಬಾಲಿಸಿ ಬೆದರಿಸಿದ್ದಲ್ಲದೆ, ಬೇರೆ ಕರ್ತವ್ಯಕ್ಕೆ ತೆರಳುತ್ತಿದ್ದಾಗಲೂ ಕಾರನ್ನು ತಡೆದು ವಾಗ್ವಾದ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



