ಬೆಂಕಿ ಹೊತ್ತಿಕೊಂಡ ಸಿಂಗಾಪುರದ ವಾನ್ ಹೈ 503 ಕಂಟೇನರ್ ಹಡಗಿನಲ್ಲಿ ಬೆಂಕಿ ನಂದಿಸಲು ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಭಾರತೀಯ ನೌಕಾಪಡೆ ಕೆಲಸ ಮಾಡುತ್ತಿವೆ.

ಸುತ್ತಲೂ ಸಮುದ್ರ ಇದ್ದರೂ ಹಡಗಿನ ಬೆಂಕಿ ನಂದಿಸಲು ಇನ್ನೂ ಕಷ್ಟವಾಗುತ್ತಿದೆ. ಬೆಂಕಿಯುಗುಳುತ್ತಲೇ ಇರುವ ಹಡಗನ್ನು 48 ಗಂಟೆ ಕಳೆದರೂ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಇದರಿಂದ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದೆ. ಕೊಲಂಬೊದಿ0ದ ಮುಂಬೈನ ನವಾ ಶೇವಾ ಬಂದರಿಗೆ ಪ್ರಯಾಣಿಸುತ್ತಿದ್ದ ಹಡಗಿನಲ್ಲಿ ಹೆಚ್ಚು ಸುಡುವ ವಸ್ತುಗಳ ಉಪಸ್ಥಿತಿಯು ಗಂಭೀರ ಕಳವಳವನ್ನು ಹುಟ್ಟುಹಾಕಿದೆ.

ಎರಡು ವಾರಗಳ ಹಿಂದೆ ಕೇರಳ ಕರಾವಳಿಯಲ್ಲಿ ಇತ್ತೀಚೆಗೆ MSC ELSA-3 ಮುಳುಗಿದ ನಂತರ ಭಯವು ಹೆಚ್ಚಾಗಿದೆ, ಆದರೆ ಹಡಗಿನಲ್ಲಿರುವ ಅಪಾಯಕಾರಿ ಸರಕುಗಳ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ. ಅಪಾಯಕಾರಿ ಸರಕುಗಳ ಜೊತೆಗೆ, ಹಡಗಿನಲ್ಲಿ ಸುಮಾರು 2,000 ಟನ್ ಇಂಧನವಿದೆ ಎಂದು ಅಂದಾಜಿಸಲಾಗಿದೆ. ಹಡಗಿನಲ್ಲಿದ್ದ ತಂಡದಲ್ಲಿ ಇಂಜಿನಿಯರ್‌ಗಳಿದ್ರೂ, ಇಂಜಿನ್ ವಿಭಾಗಗಳನ್ನು ಪರಿಶೀಲಿಸುತ್ತಿದ್ದರೂ ಇಂತಹ ಅವಘಡ ಸಂಭವಿಸಿರುವುದು ಆಶ್ಚರ್ಯ ಮೂಡಿಸಿದೆ. ಯಾವೊಂದು ಸಿಗ್ನಲ್ ಅನ್ನು ಕೂಡಾ ಹಡಗು ನೀಡಿರಲಿಲ್ಲವೇ ಎಂಬ ಪ್ರಶ್ನೆಗೂ ಸದ್ಯ ಉತ್ತರವಿಲ್ಲದಾಗಿದೆ.



