ಭಾನುವಾರ ಸಂಜೆ ಆರ್ಯಾಪು ಗ್ರಾಮದ ಸಂಟ್ಯಾರ್ ಕಲ್ಲಕಟ್ಟದಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆಗೆ ಶಾಸಕ ಅಶೋಕ್ ರೈ ತೆರಳಿದ್ದರು. ರಸ್ತೆ ಉದ್ಘಾಟನಾ ಕಾರ್ಯಕ್ರಮ ಮುಗಿದು ಬರುವ ವೇಳೆ ಶಾಸಕರ ಕಾರಿಗೆ ಬಾಲಕಿಯೋರ್ವರು ಅಡ್ಡ ನಿಂತಿದ್ದಾಳೆ.

ಏನೋ ಇರಬೇಕು ಎಂದು ಕಾರು ನಿಲ್ಲಿಸಲಾಯಿತು. ಆ ವೇಳೆ ಶಾಸಕರ ಬಳಿ ಓಡೋಡಿ ಬಂದ ಬಾಲಕಿ ಅಶೋಕಣ್ಣ ನಮ್ಮ ಮನೆ ಸೋರುತ್ತಿದೆ, ಮಲಗಲು ಆಗುತ್ತಿಲ್ಲ, ಓದಲು ಬರೆಯಲು ಆಗುತ್ತಿಲ್ಲ ನೀವು ರಿಪೇರಿ ಮಾಡಿಕೊಡಬೇಕು ಎಂದು ಹೇಳಿದ್ದಾಳೆ. ಪುಟ್ಟ ಬಾಲಕಿಯ ಮನವಿಯನ್ನು ಕೇಳಿ ಕಾರಿನಿಂದ ಇಳಿದ ಶಾಸಕರು ಬಾಲಕಿಯ ತಲೆ ಸವರಿ ಎಲ್ಲಮ್ಮಾ ನಿನ್ನ ಮನೆ ಎಂದು ಕೇಳಿದಾಗ ಅಲ್ಲೇ ಮೇಲೆ ಎಂದು ಹೇಳಿದ್ದಾಳೆ. ಕೂಡಲೇ ಸ್ಥಳೀಯ ಬೂತ್ ಅಧ್ಯಕ್ಷರನ್ನು ಕರೆಸಿ ಬಾಲಕಿಯ ಮನೆಯ ವಿಚಾರವನ್ನು ತಿಳಿದುಕೊಂಡರು. ಬಾಲಕಿಯ ತಂದೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದು ದಲಿತ ಕುಟುಂಬಕ್ಕೆ ಸೇರಿದವಳಾಗಿದ್ದಳು.

ಮನೆ ಪ್ರತೀ ಮಳೆಗಾಲದಲ್ಲೂ ಸೋರುತ್ತದೆ ಎಂಬ ವಿಚಾರವೂ ಇವರ ಗಮನಕ್ಕೆ ಬಂತು. ಕೂಡಲೇ ಶಾಸಕರು ನಿಮ್ಮ ಮನೆಗೆ ನಾನು ಶೀಟು ಹಾಕಿ ಕೊಡುತ್ತೇನೆ, ನೀನು ಹಾಸ್ಟೆಲ್‌ನಲ್ಲಿ ಕಲಿಯುವ ಆಸಕ್ತಿ ಇದ್ದರೆ ಅದಕ್ಕೂ ವ್ಯವಸ್ಥೆ ಮಾಡಿಕೊಡುತ್ತೇನೆ, ಬರೆಯುವ ಪುಸ್ತಕ ಬೇಕಿದ್ದರೆ ಅದನ್ನೂ ಮಾಡಿಕೊಡುತ್ತೇನೆ. ಏನೂ ಚಿಂತೆ ಮಾಡಬೇಡ ನಿನ್ನ ಸೋರುತ್ತಿರುವ ಮನೆಗೆ ಮುಕ್ತಿ ನೀಡುತ್ತೇನೆ ಎಂದು ಬಾಲಕಿಯನ್ನು ಸಮಾಧಾನ ಪಡಿಸಿದ್ದಾರೆ. ಈಕೆ ಸಂಟ್ಯಾರ್ ಸರಕಾರಿ ಹಿ ಪ್ರಾ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಕಲಿಯುತ್ತಿರುವ ದೀಪಾಶ್ರೀ ಎಂಬ ವಿಧ್ಯಾರ್ಥಿನಿಯಾಗಿದ್ದಾಳೆ.



