ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮರವಂತೆಯ ಸೌಪರ್ಣಿಕ ನದಿಯಲ್ಲಿ ಸಾಹಸಿ ಮಹಿಳೆಯೊಬ್ಬಳು ದೋಣಿ ಮುನ್ನಡೆಸಿ ಜನರನ್ನು ದಡ ಮುಟ್ಟಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾಳೆ.

ಸೇತುವೆಯಿಲ್ಲದ ಸೌಪರ್ಣಿಕ ನದಿಯನ್ನು ದಾಟಿ ಹೊರಜಗತ್ತಿನ ಸಂಪರ್ಕ ಪಡೆಯಲು ಈ ಮಹಿಳೆ ನೆರವಾಗುತ್ತಿದ್ದಾಳೆ. ಹಗಲಲ್ಲಿ ಪುರುಷರು ಕೆಲಸದ ನಿಮಿತ್ತ ಹೋಗುವ ಕಾರಣ ತಾನೇ ದೋಣಿ ಮುನ್ನಡೆಸುವ ಕಾಯಕ ಕೈಗೆತ್ತಿಕೊಂಡು ಶಾಲಾ ಮಕ್ಕಳು ಮತ್ತು ಊರಿನ ಜನರನ್ನ ನದಿ ದಾಟಿಸುತ್ತಿದ್ದಾಳೆ. ಸೌಪರ್ಣಿಕ ನದಿಯ ಸೇತುವೆ ನಿರ್ಮಾಣದ ಕುರಿತು ಊರಿನವರು ದಶಕಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ. ಆದರೆ ಈ ಕುರಿತು ಜನಪ್ರತಿನಿಧಿಗಳು ಇನ್ನೂ ಮೌನವಾಗಿರುವುದು ವಿಪರ್ಯಾಸ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯಲ್ಲಿ ದೋಣಿಯ ಮೂಲಕ ರಸ್ತೆ ದಾಟುವುದರಿಂದ ಅಪಾಯವೇ ಹೆಚ್ಚು. ಆದ್ದರಿಂದ ಇನ್ನಾದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿ ಎಂಬುದು ಊರವರ ಒಕ್ಕೊರಲಿನ ಕೂಗು. ಸದ್ಯ ಮಹಿಳೆಯ ಸಾಹಸಿ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.



