ಕಡಬ ಮತ್ತು ಬೆಳ್ತಂಗಡಿ ತಾಲೂಕು ಪರಿಸರದಲ್ಲಿ ಹಲವು ಸಮಯದಿಂದ ಆನೆ ದಾಳಿಗೆ ಸಂಬಧಿಸಿ ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಮೂಲಕ ಜೂ.18 ರಿಂದ ಪರಿಶೀಲನೆ ನಡೆಸಿ ವರದಿ ಪಡೆದು ಕಾಡಾನೆಯ ನಿಯಂತ್ರಣ ಮತ್ತು ಸ್ಥಳಾಂತರ ಕಾರ್ಯವನ್ನು ಮುಂದಿನ 2 ವಾರದಲ್ಲಿ ಮಾಡುವುದಾಗಿ ಮಂಗಳೂರು ವಲಯದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಲನ್ ಅವರು ಭರವಸೆ ನೀಡಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ಮಂಗಳೂರು ವಿಭಾಗ ಅಧ್ಯಕ್ಷ ಯಂ.ಜಿ.ಸತ್ಯನಾರಾಯಣ ಅವರು ತಿಳಿಸಿದ್ದಾರೆ.

ಇವರು ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಕಾಡಾನೆಯ ನಿಯಂತ್ರಣ ಮತ್ತು ಸ್ಥಳಾಂತರ ಕಾರ್ಯವನ್ನು ಮುಂದಿನ 2 ವಾರದಲ್ಲಿ ಮಾಡುವುದಾಗಿ ಭರವಸೆ ನೀಡಿದ್ದು, ಈ ಮಧ್ಯೆ ಕಾಡಾನೆಯ ಹಾವಳಿಗೊಳಪಟ್ಟ ರೈತರ ಸಭೆಯನ್ನು ಅರಣ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಪುತ್ತೂರಿನಲ್ಲಿ ಕರೆದು ನೇರ ಮಾತುಕತೆ ಹಾಗು ಮಾಹಿತಿಯನ್ನು ಪಡೆದುಕೊಳ್ಳುವ ಆಶ್ವಾಸನೆ ನೀಡಿದ್ದಾರೆ ಮುಂದಿನ ದಿನ ದ.ಕ.ಜಿಲ್ಲಾ ಪರಿಸರದಲ್ಲಿ ರೈತ ವರ್ಗದವರಿಗೆ ವನ್ಯ ಪ್ರಾಣಿಗಳಿಂದ ತೊಂದರೆ ಆದರೆ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ಇವರನ್ನು ಸಂಪರ್ಕಿಸಿದರೆ ಇಲಾಖೆಯ ಮೂಲಕ ರಕ್ಷಣೆಯನ್ನು ಕೊಡುವುದಾಗಿ ಅರಣ್ಯಸಂರಕ್ಷಣಾಧಿಕಾರಿಯವರು ಮಾಹಿತಿ ನೀಡಿದ್ದಾರೆ ಎಂದವರು ಹೇಳಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮಪ್ರಸಾದ್, ಪುತ್ತೂರು ಅಧ್ಯಕ್ಷ ಜನಾರ್ಧನ ರೈ, ಸದಸ್ಯ ದಿವ್ಯಪ್ರಸಾದ್ ಕಾವು ಉಪಸ್ಥಿತರಿದ್ದರು.



