ಜನ ಮನದ ನಾಡಿ ಮಿಡಿತ

Advertisement

ಕಸದ ಅಂತರಾಳ……ಕಸ ನಮ್ಮೊಂದಿಗೆ ಮಾತಾನಾಡಿದ ಕಾಲ್ಪನಿಕ ಚಿತ್ರಣ….!!

ಬಹುಷಃ ನಾವು ಈ ಪ್ರಪಂಚದಲ್ಲಿ ಕಸವನ್ನು ಕಡೆಗಣಿಸಿದಷ್ಟು ಬೇರಾವುದನ್ನು ಕಡೆಗಣಿಸುವುದಿಲ್ಲ. ಕಡೆಗಣಿಸುವ ವಿಚಾರ ಬಂದಾಗಲೆಲ್ಲ ನಾವು ಹೆಚ್ಚಿನ ಬಾರಿ ಕಸದ ಉದಾಹರಣೆಯನ್ನೇ ಕೊಡುತ್ತೇವೆ. ನಮಗೆ ಒಂದು ವಸ್ತುವಿನ ಉಪಯೋಗ ಮುಗಿದ ಮೇಲೆ ಅದು ನಮ್ಮ ದೃಷ್ಟಿ ಯಲ್ಲಿ ಕಸವಾಗಿ ಬಿಡುತ್ತದೆ. ಕಸದ ಬಗ್ಗೆ ಈ ಹಿಂದೆ ನಾನೂ ಕೂಡ ಅಷ್ಟು ಗಂಭೀರವಾಗಿ ಚಿಂತಿಸಿದವನಲ್ಲ. ಎಲ್ಲೆಂದರಲ್ಲಿ ಅವುಗಳನ್ನು ಎಸೆದು ಹೋಗುವ ಅವಿವೇಕಿಕಗಳ ಕ್ಯಾಟಗರಿಗೆ ನಾನೂ ಕೂಡ ಸೇರುತ್ತಿದ್ದೆ. ಕಸದ ವಿಲೇವಾರಿ ಸರಿಯಾಗಿ ಮಾಡದೇ ಪರಿಸರ ಮಲಿನಗೊಳಿಸುವ ನಾವುಗಳು ಅವುಗಳ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯತೆಯಿದೆ. ಕಸದ ವಿಲೇವಾರಿ ಮತ್ತು ಕಸಗಳ ಬಗ್ಗೆ ನಾನೂ ಕೂಡ ಗಂಭೀರವಾಗಿ ಚಿಂತಿಸುವ ಪ್ರಸಂಗ ಒಮ್ಮೆ ಒದಗಿಬಂದಿತ್ತು. ಅದೊಂದು ಬಾರಿ ನಮ್ಮ ಕಾಲೇಜಿನಿಂದ ಫೀಲ್ಡ್ ವಿಸಿಟ್ ನೆಪದಲ್ಲಿ ಒಂದು ಜಾಗಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಮರಳಿ ಬರಬೇಕಾದರೆ ನಮ್ಮ ಬಸ್ ಒಂದು ಕಡೆ ಸುಮಾರು ಹೊತ್ತು ಕೆಟ್ಟು ನಿಂತಿತ್ತು. ಆ ಬಸ್ ಕೆಟ್ಟು ನಿಂತ ರಸ್ತೆಯ ಪಕ್ಕ ನಾನಾ ಊರು, ನಗರಗಳಿಂದ ಕಸಗಳನ್ನು ತಂದು ಹಾಕುವ ದೊಡ್ಡದೊಂದು ಜಾಗವಿತ್ತು. ಅಲ್ಲಿ ತಾಜ್ಯಗಳ ಬ್ರಹತ್ ಸಂಗ್ರವೇ ಇತ್ತು. ಸರಿಯಾಗಿ ವಿಂಗಡಿಸದೇ ಅಲ್ಲಿ ತಂದು ಸುಮ್ಮನೇ ಅವುಗಳನ್ನು ರಾಶಿ ಹಾಕಿದ್ದರು. ಸರಿಯಾಗಿ ವಿಲೇವಾರಿ ಮಾಡದ ಆ ಕಸಗಳು ಕೂಡ ಒದ್ದಾಡುವಂತೆ ನನಗೆ ಭಾಸವಾಯಿತು. ಅವುಗಳ ಅಂತರಾಳದಲ್ಲೂ ಏನೋ ಒಂದು ನೋವಿರಬಹುದು, ನಮ್ಮಲ್ಲಿ ಹಂಚಿಕೊಳ್ಳಬೇಕಾದ ಒಂದಷ್ಟು ವಿಚಾರಗಳಿರಬಹುದು ಎಂದೆಲ್ಲ ನನಗ್ಯಾಕೋ ಬಲವಾಗಿ ಅನ್ನಿಸತೊಡಗಿತು. ಒಂದು ವೇಳೆ ಅವುಗಳು ಮನುಷ್ಯನ ಜೊತೆ ಸಂವಾದ ನಡೆಸಿದರೆ ಅದು ಹೇಗಿರಬಹುದು ಎಂದು ಯೋಚಿಸಿ ಸುಮ್ಮನೆ ಪುಸ್ತಕ ತೆರೆದು ಗೀಚಲು ಕುಳಿತೆ. ಕಸ ನಮ್ಮೊಂದಿಗೆ ಮಾತಾನಾಡಿದ ಕಾಲ್ಪನಿಕ ಚಿತ್ರಣ ಹೀಗಿತ್ತು,

 


“ನಾನು ನಿಮ್ಮೆಲ್ಲರ ಅವಶ್ಯಕತೆಗಳ ಪಟ್ಟಿಯಲ್ಲಿ ಕಡೆ ಸ್ಥಾನದಲ್ಲಿ ನಿಲ್ಲುವ ಕಸ. ತ್ಯಾಜ್ಯ, ಅನುಪಯುಕ್ತ ವಸ್ತು ಹೀಗೆ ನನಗೆ ಹತ್ತು ಹಲವಾರು ಹೆಸರುಗಳಿವೆ. ನಿಮ್ಮಲ್ಲಿ ಕೆಲವು ವಿನಂತಿಗಳನ್ನು ಮಾಡಲು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ನನ್ನಿಂದ ನಿಮಗೆಲ್ಲ ಕನಿಷ್ಠ ಉಪಯೋಗವು ಇಲ್ಲ ನಿಜ, ಆದರೆ ನನ್ನನ್ನು ನನ್ನ ಮನೆ ಕಸದ ತೊಟ್ಟಿಗೆ ತಲುಪುವಂತೆ ಮಾಡಲು ಒಂದು ಸಣ್ಣ ಪ್ರಯತ್ನ ನಿಮ್ಮಿಂದ ಆಗಬೇಕಿದೆ. ನನ್ನ ಸರಿಯಾದ ವಿಲೇವಾರಿಯಲ್ಲಿ ನೀವುಗಳು ಮೇಲಿಂದ ಮೇಲೆ ಎಡವುತ್ತಿದ್ದೀರ. ನನಗೂ ಪ್ರತಿದಿನ ನನ್ನ ಮನೆ ಸೇರಬೇಕು ಎನ್ನುವ ಆಸೆ ಬಹಳ ಇದೆ. ಆದರೆ ನೀವುಗಳು ನನ್ನನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತೀರ. ಮನೆಯಿಂದ ದೂರವಾಗಿ ನನ್ನವರಿಂದ ದೂರವಾಗಿ ಅದೆಷ್ಟೋ ದಿನ ಅನಾಥನಾಗಿ ನಾನು ಹಾಕಿದ ಜಾಗದಲ್ಲೇ ಕೊರಗುತ್ತಿರುತ್ತೇನೆ. ಮುಂದೊಂದು ದಿನ ಯಾರೋ ಒಬ್ಬ ಜವಾಬ್ದಾರಿಯುತ ನಾಗರಿಕ ನನ್ನನ್ನು ನನ್ನ ಮನೆಗೆ ಸೇರಿಸುತ್ತಾನೆ. ಅಷ್ಟರಲ್ಲಾಗಲೇ ನನ್ನ ಮನೆಯವರನ್ನು ಬೇರೆ ಕಡೆಗೆ ಸಾಗಿಸಿರುತ್ತಾರೆ. ಮುಂದೆ ನಾನು ನನ್ನ ಮನೆಯಲ್ಲಿ ಅದ್ಯಾರೋ ಅಪರಿಚಿತರೊಂದಿಗೆ ದಿನ ಕಳೆಯಬೇಕಾಗುತ್ತದೆ. ಕೆಲವು ಬಾರಿ ನೀವುಗಳು ನಾನು ಹಸಿ ಕಸ ಎಂದು ತಿಳಿದಿದ್ದರೂ ಕೂಡ ನನ್ನನ್ನು ಒಣ ಕಸದ ಮನೆಗೆ ಸೇರಿಸಿಬಿಡುತ್ತೀರ. ಇಲ್ಲ, ಕೆಲವೊಮ್ಮೆ ಇದರ ತದ್ವಿರುದ್ದ ಮಾಡಿ ನನ್ನನ್ನು ಕಷ್ಟಕೆ ದೂಡುವುದು ನಿಮಗೆ ಅಭ್ಯಾಸವಾಗಿಬಿಟ್ಟಿದೆ. ನನ್ನದಲ್ಲದವರ ಜೊತೆಗೆ ನಾನು ಅದೆಷ್ಟು ಒದ್ದಾಡುತ್ತೇನೆ ಎಂಬುದು ಕೇವಲ ನನಗೆ ಮಾತ್ರ ತಿಳಿದಿದೆ. ನನ್ನ ನಿರ್ವಹಣೆಯಲ್ಲಿ ನೀವುಗಳು ವಿಫಲಗೊಂಡು ಪರಿಸರ ಮಾಲಿನ್ಯಕ್ಕೆ ನನ್ನನ್ನು ಹೊಣೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ನನ್ನನ್ನು ಸರಿಯಾಗಿ ನನ್ನ ಮನೆಗೆ ಸೇರಿಸಿಬಿಟ್ಟರೆ ನೀವಿರುವ ಪರಿಸರವು ಕೂಡ ನಿರ್ಮಲವಾಗಿರುತ್ತದೆ. ನನ್ನನ್ನು ಸರಿಯಾಗಿ ವಿಂಗಡಿಸಿ ನನ್ನ ಮನೆಗೆ ಸೇರಿಸುವಲ್ಲಿ ನಿಮ್ಮದೊಂದು ಸಣ್ಣ ಪ್ರಯತ್ನ ದೊಡ್ಡ ಬದಲಾವಣೆಗೆ ಮುನ್ನುಡಿ ಬರೆಯುತ್ತದೆ. ಇದು ಈ ಅಲ್ಪನ ಮನದಾಳದ ವಿನಂತಿ, ದಯವಿಟ್ಟು ಪರಿಗಣಿಸಿ.

 

ಇಷ್ಟು ಬರೆದು ಮುಗಿಸುವ ಹೊತ್ತಿಗೆ ಕಸ ನನ್ನೊಳಗೆ ಸಾಕಷ್ಟು ಜಾಗೃತಿ ಮೂಡಿಸಿತ್ತು. ಆಗಲೇ ನಮ್ಮ ಬಸ್ ಕೂಡ ರಿಪೇರಿಯಾಗಿತ್ತು. ಬಸ್ ನಲ್ಲಿ ಕೂತ ನಮಗೆ ಶಿಕ್ಷಕರೊಬ್ಬರು ಐಸ್ ಕ್ರೀಮ್ ಹಂಚಿದ್ದರು. ಆ ಐಸ್ ಕ್ರೀಮ್ ಪ್ಯಾಕೆಟನ್ನು ಸದಾ ತೆರೆದು ಬಸ್ಸಿನ ಕಿಟಕಿಯ ಹೊರಗೆ ಎಸೆಯುತ್ತಿದ್ದ ನಾನು ಅಂದು ಮಾತ್ರ ಮಡಚಿ ಬ್ಯಾಗಿನೊಳಗೆ ತುಂಬಿಸಿಕೊಂಡೆ. ಕಸದ ಅಂತರಾಳ ನನಗೆ ಬಲವಾಗಿ ಅರ್ಥವಾಗಿತ್ತು. ಕಸವನ್ನು ಅದರ ಮನೆಗೆ ಸೇರಿಸುವ ಸಲುವಾಗಿ ಸಣ್ಣದೊಂದು ಪ್ರಯತ್ನ ಮಾಡಲು ನಾನು ದೃಢವಾಗಿ ನಿಶ್ಚಯಿಸಿದ್ದೆ. ನಾವೆಲ್ಲರೂ ಕೂಡ ಇಂತಹದೊಂದು ಸಣ್ಣ ಪ್ರಯತ್ನ ಮಾಡದೇ ಹೋದರೆ ಪೂರ್ತಿ ಪರಿಸರ ಮಲಿನಗೊಂಡು ನಾಶವಾಗುವುದರಲ್ಲಿ ಅನುಮಾನವಿಲ್ಲ. ಬಾಲ್ಯದಿಂದಲೇ ಪಠ್ಯಪುಸ್ತಕಗಳಲ್ಲಿ ಕಸದ ವಿಲೇವಾರಿಯ ಬಗ್ಗೆ ಕಲಿತುಕೊಳ್ಳುವ ನಾವುಗಳು ಅದರ ಪಾಲನೆಯಲ್ಲಿ ಸದಾ ಎಡವುತ್ತೇವೆ. ಕಸದ ಸೂಕ್ತ ವಿಲೇವಾರಿಯ ಬಗ್ಗೆ ಇನ್ನಾದರೂ ಎಚ್ಚೆತುಕೊಳ್ಳುವ ಅಗತ್ಯತೆಯಿದೆ. ಕಸದ ಅಂತರಾಳವನ್ನು ಅರಿತು ಅದನ್ನು ಅದರ ಮನೆಗೆ ತಲುಪಿಸುವಲ್ಲಿ ಸಣ್ಣದೊಂದು ಪ್ರಯತ್ನ ನಮ್ಮಿಂದ ಆಗಬೇಕಿದೆ.

                                                                                                                                                                                      ಚೇತನ್ ಕಾಶಿಪಟ್ನ

Leave a Reply

Your email address will not be published. Required fields are marked *

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

ಮಂಗಳೂರು: ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆ ಜಾನುವಾರು ವಧೆ…!

ಉಡುಪಿ: ಅಂಬಲಪಾಡಿಯಲ್ಲಿ ನೇಣಿಗೆ ಶರಣಾದ ಯುವಪ್ರೇಮಿಗಳು….!

ಮಂಗಳೂರು: ಮಾಧವ ಕೊಳತ್ತ ಮಜಲು ಅವರಿಗೆ ಕದ್ರಿ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ..!

error: Content is protected !!