ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಇದೇ ಬರುವ ಜೂನ್ 29 ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ದುಬೈ (ಯುಎಇ) ಘಟಕದ ಸಹಯೋಗದೊಂದಿಗೆ ನಗರದ ಕರಾಮದ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಆಡಿಟೋರಿಯಂನಲ್ಲಿ ಜರಗಲಿರುವುದು ಎಂದು ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜರವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸುತ್ತ ಜೂನ್ 29 ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7 ಗಂಟೆಯ ವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ದಶಮ ಸಂಭ್ರಮದ ಪ್ರಯುಕ್ತ ಯುಎಇಯ ಏಳು ಮಂದಿ ಸಾಧಕರಿಗೆ ಮತ್ತು ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಇತ್ತೀಚಿಗೆ ನಗರದ ಫಾರ್ಚೂನ್ ಪ್ಲಾಜಾದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಯುತ ದಿನೇಶ್ ಶೆಟ್ಟಿ ಕೊಟ್ಟಿಂಜರವರು ಯಕ್ಷಗಾನ ಅಭ್ಯಾಸ ಕೇಂದ್ರದ ವತಿಯಿಂದ ಅದ್ದೂರಿಯ ಸಂಮಾನಕ್ಕೆ ಪಾತ್ರರಾಗಲಿರುವ ಸಾಧಕರ ವಿವರವನ್ನು ಮಾಧ್ಯಮದ ಮುಂದೆ ಇಟ್ಟರು. ವಿವರ ಹೀಗಿದೆ.
ಸಂಘಟನೆ ಕ್ಷೇತ್ರ- ಶ್ರೀ ಸರ್ವೋತ್ತಮ ಶೆಟ್ಟಿ-ಯುಎಇಯಲ್ಲಿ ತುಳು ಕನ್ನಡ ಸಂಘ ಸಂಸ್ಥೆಗಳ ಮೂಲಕ ತನ್ನನ್ನು ತಾನು ತೊಡಗಿಸಿಕೊಂಡಂತಹ ಯುಎಇ ಬಂಟ್ಸ್ ನ ಗೌರವ ಅಧ್ಯಕ್ಷರು, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರ ಹಿರಿತನ.
ಕಲಾ ಪೋಷಕ-ವಕ್ವಾಡಿ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ-ಬಲ ಕೈಯಲ್ಲಿ ಕೊಟ್ಟದ್ದು ಎಡ ಕೈಗೆ ಗೊತ್ತಾಗದಂತೆ ಯುಎಇಯ ಕನ್ನಡ ತುಳು ಸಂಘ ಸಂಸ್ಥೆಗಳಿಗೆ ಪೋಷಕರಾಗಿ ಹಾಗೂ ತಾಯ್ನಾಡಿನಲ್ಲಿಯು ಸಮಾಜ ಸೇವೆ ಮಾಡುತಿರುವ ಯುಎಇ ಬಂಟ್ಸ್ ನ ಅಧ್ಯಕ್ಷರು,ಎನ್.ಆರ್.ಐ.ಯ ಅಧ್ಯಕ್ಷರು.
ಉದ್ಯಮ ಕ್ಷೇತ್ರ- ಪುತ್ತಿಗೆ ಶ್ರೀ ವಾಸುದೇವ ಭಟ್- ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ಹಲವಾರು ಮಂದಿಗೆ ಉದ್ಯೋಗವನ್ನು ನೀಡಿದ ಹಿರಿಯ ಉದ್ಯಮಿ.
ಸಮಾಜ ಸೇವಾ ಕ್ಷೇತ್ರ-ಶ್ರೀ ಬಾಲಕೃಷ್ಣ ಸಾಲಿಯಾನ್- ಯುಎಇಯಲ್ಲಿ ರಕ್ತದಾನ ಶಿಬಿರದ ಸಂಘಟನೆಗಳನ್ನು ಮಾಡಿ ಯುಎಇಯ ತುಳು ಕನ್ನಡಿಗರ ಪ್ರೀತಿಗೆ ಪಾತ್ರರಾದವರು.
ಮಾಧ್ಯಮ ಕ್ಷೇತ್ರ-ಶ್ರೀ ಬಿ. ಕೆ. ಗಣೇಶ ರೈ- ಯು ಎ ಇ., ಯ ಕಾರ್ಯಕ್ರಮ, ವೈವಿಧ್ಯ, ವಿಶೇಷ- ಸಾಧಕರ ಪರಿಚಯ,ಮಾಧ್ಯಮ ಪ್ರಚಾರಗಳ ಮೂಲಕ ಜನಾನುರಾಗಿ, ಸ್ವತಃ ಲೇಖಕ, ಶಿಲ್ಪಿ, ಭಾಷಣಗಾರ.
ನಾಟಕ-ಶ್ರೀ ಡೋನಿ ಕೊರೆಯಾ-ತುಳು ಕೊಂಕಣಿ ನಾಟಕಗಳ ಮೂಲಕ ಚಿರಪರಿಚಿತ ಕಲಾವಿದ ಸಿನಿ ಕಲಾವಿದ ಹಾಗೂ ಗಮ್ಮತ್ ಕಲಾವಿದೆರ್ ದುಬೈ ತಂಡದ ಪ್ರತಿಭಾವಂತ ಕಲಾವಿದ-ಗಾಯಕ.
ಭರತನಾಟ್ಯ-ಶ್ರೀಮತಿ ರೂಪ ಕಿರಣ್-ಯುಎಇಯ ನೂರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಶಿಕ್ಷಕಿಯಾಗಿ ಭರತನಾಟ್ಯದ ಮೂಲಕ ಚಿರಪರಿಚಿತರಾದ ಖ್ಯಾತ ನೃತ್ಯ ಪಟು, ಗುರು, ನೃತ ಶಕ್ತಿ ಭರತನಾಟ್ಯ ಕಲಿಕಾ ಕೇಂದ್ರದ ಸ್ಥಾಪಕಿ.
ಭಜನೆ-ಶ್ರೀ ರಾಜರಾಜೇಶ್ವರಿ ಭಜನಾ ತಂಡ-ಕಳೆದ ಇಪ್ಪತ್ತು ವರ್ಷಗಳಿಂದ ಯುಎಇಯ ಎಲ್ಲಾ ಸಂಘಟನೆಗಳ ಹಾಗೂ ಮನೆಗಳಲ್ಲಿ ಪೂಜೆ ಪುರಸ್ಕಾರ ಕಾರ್ಯಕ್ರಮಗಳಲ್ಲಿ ಭಜನೆ ಸೇವೆಯನ್ನು ನಡೆಸಿಕೊಂಡು ಬರುತ್ತಿರುವ ಭಜನಾ ಸೇವಾ ಸಂಸ್ಥೆ.
ಸಂಸ್ಕೃತಿ-ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ-ಸಂಸ್ಕೃತಿ ಪಾಲನೆ-ಪ್ರಚಾರ, ಸೇವಾ ಕಾರ್ಯ ಮುಂತಾದ ಹತ್ತು ಹಲವು ಧ್ಯೇಯ ಧೋರಣೆಗಳನ್ನು ಇರಿಸಿಕೊಂಡು, ಹಲವಾರು ವರ್ಷಗಳಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆಯನ್ನು ಮಾಡಿಕೊಂಡು ಬರುತಿರುವ ಸೇವಾ ಸಂಸ್ಥೆ.
ಕನ್ನಡ ನಾಡು -ನುಡಿ-ಭಾಷೆ-ಕನ್ನಡ ಪಾಠ ಶಾಲೆ, ದುಬಾಯಿ-ದುಬೈಯ ಕನ್ನಡ ವಿದ್ಯಾರ್ಥಿಗಳಿಗೆ ನಮ್ಮ ಮಾತೃ ಬಾಷೆಯ ಕಲಿಕಾ ತರಗತಿ ಮೂಲಕ, ನಮ್ಮ ಮಕ್ಕಳು ತಾಯ್ನಾಡಿನ ಸಂಸ್ಕೃತಿ -ಆಚಾರ-ವಿಚಾರಗಳೊಂದಿಗೆ ಬೆಸೆಯುವ ಕಾಯಕ ಮಾಡುತ್ತಿರುವ ಸಂಸ್ಥೆ.
ಇವರನ್ನು ದಶಮಾನೋತ್ಸವ ಕಾರ್ಯಕ್ರಮ ನಿಮಿತ್ತ ಸಮಸ್ತ ಯು ಎ ಇ., ಜನತೆಯ ಪರವಾಗಿ ಅಭಿನಂದಿಸಿ-ಸಂಮಾನಿಸಿ ಗೌರವಿಸಲು ಸಂತೋಷವಾಗುತ್ತಿದೆ ಹಾಗೂ ಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಡೈಜಿವರ್ಲ್ಡ್ ನ ಚೇತನ್ ಶೆಟ್ಟಿ ಮಾಡಲಿದ್ದಾರೆ ಎಂದು ತಿಳಿಸಿದರು.
ಯಕ್ಷ ಗುರು ಶೇಖರ್ ಡಿ. ಶೆಟ್ಟಿಗಾರ್ ಮಾತನಾಡುತ್ತಾ ಬೆಳಿಗ್ಗೆ ಒಂಬತ್ತು ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭವಾಗುತ್ತದೆ. ಮೊದಲಿಗೆ ಹತ್ತು ಮಂದಿ ಚೆಂಡೆವಾದಕರು, ಮೂರು ಮಂದಿ ಮದ್ದಳೆ, ಮೂರು ಮಂದಿ ಚಕ್ರತಾಳ,ಇಬ್ಬರು ತಾಳದವರನ್ನೊಳಗೊಂಡ ಒಟ್ಟು ಹದಿನೆಂಟು ಮಂದಿಗಳ ಅಬ್ಬರ ತಾಳದಿಂದ (ಇದರಲ್ಲಿ ನಮ್ಮ ಹಿಮ್ಮೇಳದ ಕಲಿಕಾ ವಿದ್ಯಾರ್ಥಿಗಳು ಇದ್ದಾರೆ) ಚಾಲನೆಗೊಳ್ಳುವ ಕಾರ್ಯಕ್ರಮ ಮುಂದೆ ಚೌಕಿ ಪೂಜೆ, ಪುಟ್ಟ ಪುಟಾಣಿಗಳ-ಪೂರ್ವ ರಂಗ ಮತ್ತು ಊರಿನ ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ದೇವಿಪ್ರಸಾದ್ ಆಳ್ವ ತಲಪಾಡಿ ಮತ್ತು ಶ್ರೀಮತಿ ಕಾವ್ಯಶ್ರೀ ಅಜೇರುಯವರಿಂದ ಇದೇ ಮೊದಲ ಬಾರಿಗೆ ಯು ಎ ಇ., ಯಲ್ಲಿ ಗಾನ ವೈಭವ ನಡೆಯಲಿದೆ. ನಂತರ ಗಣ್ಯಾತಿಗಣ್ಯರ ಮೂಲಕ ಭವ್ಯ ಶೋಭಯಾತ್ರೆಯಲ್ಲಿ ಕೇಂದ್ರದ ಅಭಿಮಾನಿಗಳು ಮತ್ತು ಶ್ರೀ ದೇವಿ ಭಕ್ತವೃಂದದವರ ಸೇವಾರ್ಥ- ಸಮರ್ಪಿಸಿದ ಶ್ರೀದೇವಿಯ ಬೆಳ್ಳಿಯ ಕಿರೀಟ, ತುರಾಯಿ, ಶಂಖ-ಚಕ್ರಗಳನ್ನು ವೇದಿಕೆಗೆ ತರಲಾಗುವುದು. ಅದೇ ಸಭಾವೇದಿಕೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕಾಸರಗೋಡು ಸುಬ್ರಯ ಹೊಳ್ಳರವರಿಗೆ ಯಕ್ಷ ಶ್ರೀ ರಕ್ಷಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ನಂತರ ಊರಿನ ಪ್ರಸಿದ್ದ ಕಲಾವಿದರಾದ ಶ್ರೀ ಅರುಣ್ ಕೋಟ್ಯಾನ್ ಮತ್ತು ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು ಹಾಗು ಕೇಂದ್ರದ ಕಲಾವಿದರ ಕೂಡುವಿಕೆಯಿಂದ ಶಿವಾನಿ-ಸಿಂಹವಾಹಿನಿ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಯಕ್ಷಗಾನ ಅಭಿಮಾನಿಗಳಿಗೆ ಸಾದರದ ಸ್ವಾಗತ ಬಯಸುತ್ತಾ ಎಲ್ಲರಿಗೂ ಅನ್ನದಾನದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂದೀಪ್ ಶೆಟ್ಟಿ ಕೊಟ್ಟಿಂಜ,ವಸಂತ ಶೆಟ್ಟಿ, ವಿಕ್ಕಿ ಶೆಟ್ಟಿ, ಪ್ರಕಾಶ ಪಕ್ಕಳ, ರಾಜೇಶ್ ಕುತ್ತಾರ್,ರಮಾನಂದ , ಸೀತಾರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…