ಹೆಂಡತಿ ವಿಪರೀತ ಮೊಬೈಲ್ ಬಳಸುತ್ತಾಳೆಂದು ಸಿಟ್ಟುಗೊಂಡ ಪತಿ, ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಬ್ರಹ್ಮಾವರ ತಾಲ್ಲೂಕಿನ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ನಡೆದಿದೆ.

ಹೊಸಮಠ ನಿವಾಸಿ 27ರ ಹರೆಯದ ರೇಖಾ ಕೊಲೆಯಾದ ಮಹಿಳೆ. ಈಕೆಯ ಪತಿ ಕೊಳಂಬೆ ಗ್ರಾಮದ ನಿವಾಸಿ 42 ರ ಹರೆಯದ ಗಣೇಶ ಪೂಜಾರಿ ಎಂಬಾತನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ವೃತ್ತಿಯಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಗಣೇಶ್ ಪೂಜಾರಿ ಪತ್ನಿ ಯಾವಾಗಲೂ ವಿಪರೀತ ಮೊಬೈಲ್ ಉಪಯೋಗಿಸುತ್ತಾಳೆಂದು ಸಿಟ್ಟಿನಿಂದ ಮದ್ಯಪಾನ ಮಾಡಿಕೊಂಡು ಬಂದು ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿನಿಂದ ಪತ್ನಿಯ ಕುತ್ತಿಗೆಗೆ ಕತ್ತಿಯಿಂದ ಕಡಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ರೇಖಾ ಸ್ಥಳದಲ್ಲಿ ಕೊನೆಯುಸಿರೆಳೆದಿದ್ದಾಳೆ. ಬಳಿಕ ಆರೋಪಿ ಗಣೇಶ್ ಪೂಜಾರಿ ಮನೆಯಿಂದ ಓಡಿ ಹೋಗಿದ್ದನು. ತಕ್ಷಣವೇ ಕಾರ್ಯಾಚರಣೆಗೆ ಇಳಿದ ಶಂಕರನಾರಾಯಣ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯಾದ ರೇಖಾ ಪೂಜಾರಿ ಹಾಗೂ ಆರೋಪಿ ಗಣೇಶ ಪೂಜಾರಿ ದಂಪತಿಗಳಿಗೆ 6 ವರ್ಷ ಮತ್ತು 3 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



