ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗ ಮಾಡಿ ಎಂದು ಜಗತ್ತಿಗೆ ಸಾರಿ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಯೋಗವನ್ನು ಜನಪ್ರಿಯಗೊಳಿಸಿದ ದಿನ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯೋಗದ ಮಹತ್ವವನ್ನು ಮನಗಂಡು ಅದನ್ನು ಜನಪ್ರಿಯಗೊಳಿಸಿದ ಪರಿಣಾಮವಾಗಿ ಯೋಗದ ಬಗ್ಗೆ ಜನರಲ್ಲಿ ವ್ಯಾಪಕವಾದ ಜನಜಾಗೃತಿ ಉಂಟಾಗಿದೆ. ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಮುನ್ನಾ ಉಡುಪಿ ಜಿಲ್ಲೆಯ ಕೋಡಿ ಹಳೆ ಅಳಿವೆ ಬಳಿಯ ಕಡಲ ಕಿನಾರೆಯಲ್ಲಿ ಪದ್ಮಾಸನದ ಮರಳು ಶಿಲ್ಪವನ್ನು ರೂಪಿಸಿ ಜನರ ಗಮನ ಸೆಳೆಯಲಾಗುತ್ತಿದೆ. ಈ ಮರಳು ಉಬ್ಬು ಶಿಲ್ಪವು ಯೋಗದ ಮಹತ್ವವನ್ನು ಸಾರುವ ಜೊತೆಗೆ ಅದರ ಆಸನಗಳ ಪರಿಚಯವನ್ನು ಮಾಡಿಸುವಂತಿದೆ. ಪದ್ಮಾಸನದಲ್ಲಿರುವ ಈ ಶಿಲ್ಪವನ್ನು ಸ್ಯಾಂಡ್ ಥೀಮ್ ಉಡುಪಿ ತಂಡ ರಚಿಸಿದೆ. ಯೋಗಪಟುವನ್ನು ಕೇಂದ್ರವಾಗಿಟ್ಟುಕೊಂಡು ರಚನೆಯಾಗಿರುವ ಕಲಾಕೃತಿಯ ಉತ್ತಮ ಆರೋಗ್ಯಕ್ಕಾಗಿ ಯೋಗ ಎಂಬ ಧ್ಯೇಯ ವಾಕ್ಯವನ್ನು ಸಾರುತ್ತಿದೆ. ಮೂರು ಅಡಿ ಎತ್ತರ ಮತ್ತು ಏಳು ಅಡಿ ಅಗಲದ ಮರಳು ಕಲಾಕೃತಿಯನ್ನು ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ರಚಿಸಿದ್ದಾರೆ.



