ಮನೆ ಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯವು ಪ್ರಜ್ವಲ್ ರೇವಣ್ಣ ವಿರುದ್ಧ ವಿಚಾರಣೆ ಮುಂದುವರಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ (ಜೂ.20)ದಂದು ಸ್ಪಷ್ಟಪಡಿಸಿದೆ. ಮನೆಕೆಲಸದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಸಂಬAಧ ದಾಖಲಾಗಿರುವ ಎಫ್‌ಐಆರ್, ಆನಂತರ ಸಲ್ಲಿಕೆಯಾಗಿರುವ ಆರೋಪ ಪಟ್ಟಿ ಹಾಗೂ ನ್ಯಾಯಾಂಗ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಜೆಡಿಎಸ್ ಶಾಸಕ ಹಾಗೂ ಪ್ರಜ್ವಲ್ ತಂದೆ ಎಚ್. ಡಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ. ರೇವಣ್ಣ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ.ವಿ ನಾಗೇಶ್ ಅವರು ರೇವಣ್ಣ ಅವರಿಗೆ ಸೀಮಿತವಾಗಿ ಈ ನ್ಯಾಯಾಲಯ ಮಧ್ಯಂತರ ಆದೇಶ ಮಾಡಿದೆ. ಪ್ರಜ್ವಲ್ ವಿರುದ್ಧ ವಿಚಾರಣೆ ಮುಂದುವರಿಸಲು ಯಾವುದೇ ಅಡ್ಡಿಯಿಲ್ಲ ಎಂದರು. ಇದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ಧ್ವನಿಗೂಡಿಸಿದರು.

ಇದನ್ನು ಆಲಿಸಿದ ಪೀಠವು ರೇವಣ್ಣ ವಿರುದ್ಧದ ನ್ಯಾಯಾಂಗ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲಾಗಿದೆ. ಹೀಗಾಗಿ, ಪ್ರಜ್ವಲ್ ವಿರುದ್ಧ ವಿಚಾರಣಾಧೀನ ನ್ಯಾಯಾಲಯವು ವಿಚಾರಣೆ ಮುಂದುವರಿಸಲು ಈ ಆದೇಶ ಅಡ್ಡಿಯಾಗದು ಎಂದು ಸ್ಪಷ್ಟಪಡಿಸಿ, ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿದೆ. ಪ್ರಕರಣದ ಹಿನ್ನೆಲೆಯನ್ನು ಗಮನಿಸೋದಾದ್ರೆ ಹಾಸನ ಜಿಲ್ಲೆ ಹೊಳೆನರಸೀಪುರ ಪೊಲೀಸ್ ಠಾಣೆಗೆ ಎಚ್.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಎಚ್.ಡಿ ರೇವಣ್ಣ ಮತ್ತು ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಆನಂತರ ಸಂತ್ರಸ್ತೆಯ ಸಿಆರ್‌ಪಿಸಿ ಸೆಕ್ಷನ್ 164 ಹೇಳಿಕೆ ಆಧರಿಸಿ ಪ್ರಜ್ವಲ್ ವಿರುದ್ಧ ಮಾತ್ರ ಅತ್ಯಾಚಾರ ಆರೋಪ ಸೇರಿಸಿ, ಸಕ್ಷಮ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡವು ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಿದೆ. ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾತ್ರ ಇದೆ. ಈ ಪ್ರಕರಣದಲ್ಲಿ ರೇವಣ್ಣಗೆ ಜಾಮೀನು ದೊರೆತಿದ್ದು, ಅವರ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ. ಇದೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್ ಜಾಮೀನು ಕೋರಿದ್ದಾರೆ. ಇನ್ನು ಪ್ರಜ್ವಲ್ ಅರ್ಜಿ ಸಂಬAಧ ವಾದ-ಪ್ರತಿವಾದ ಆಲಿಸಿರುವ ನ್ಯಾಯಾಲಯ ವಿಚಾರಣೆಯನ್ನು ಜೂನ್ 24ಕ್ಕೆ ಮುಂದೂಡಿಕೆ ಮಾಡಿದೆ



