ಕಳೆದ ಕೆಲವು ದಿನಗಳಿಂದ ಸುರಿಯುವ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಜರಿತಗಳು ಸಂಭವಿಸಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಎಡಕುಮೇರು ಬಳಿ ರೈಲ್ವೆ ಹಳಿಗೆ ಜೂನ್ 21ರಂದು ಬೆಳಗಿನ ಜಾವ ರಾತ್ರಿ ಬೃಹತ್ ಗಾತ್ರದ ಬಂಡೆ ಬಿದ್ದಿದ್ದು, ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುವ ರೈಲು ಸಂಚಾರ ಸ್ಥಗಿತಗೊಂಡಿದೆ. ಎಡಕುಮೇರು ಮತ್ತು ಶಿರಿಬಾಗಿಲು ಸ್ಟೇಷನ್ ನಡುವೆ ಹಳಿಗಳ ಮೇಲೆ ಬಂಡೆ ಬಿದ್ದಿದ್ದು, ಹಳಿಗಳಿಗೆ ಹಾನಿಯಾಗಿದೆ. ಇದರಿಂದಾಗಿ ಬೆಂಗಳೂರು ಕಣ್ಣೂರು, ಬೆಂಗಳೂರು ಮಂಗಳೂರು, ಮುರುಡೇಶ್ವರ ರೈಲು ಸಂಚಾರ ಸ್ಥಗಿತಗೊಂಡಿತ್ತು. ಶನಿವಾರ ಬೆಳಿಗ್ಗೆ 7.30ಕ್ಕೆ ಬಿ.ಸಿ.ರೋಡು ತಲುಪುವ ಮುರುಡೇಶ್ವರ ರೈಲು ಸುಮಾರು 5 ಗಂಟೆಗಳ ಕಾಲ ತಡವಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು ಎಂದು ಸ್ಥಳೀಯ ಪ್ರಯಾಣಿಕರು ತಿಳಿಸಿದ್ದಾರೆ. ಸಕಲೇಶಪುರದಲ್ಲಿ ಸ್ಥಗಿತಗೊಂಡ ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ಬೆಳಿಗ್ಗಿನ ಉಪಹಾರ ವ್ಯವಸ್ಥೆ ಮಾಡಲಾಗಿದೆಯೆಂದು ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಶಿರಾಡಿ ಘಾಟಿ ಪ್ರದೇಶದಲ್ಲಿ ಗುಡ್ಡ ಜರಿದು ರಸ್ತೆಗೆ ಹಾನಿ ಸಂಭವಿಸದ್ದರಿಂದ ಪ್ರಯಾಣಿಕರು ಹೆಚ್ಚಾಗಿ ರೈಲು ಪ್ರಯಾಣವನ್ನು ಆಶ್ರಯಿಸುತ್ತಿದ್ದಾರೆ.



