ಉಡುಪಿ: ಜಲಪಾತ ನೋಡಲು ಹೋಗಿದ್ದ ಯುವಕನೊಬ್ಬ ಕಾಲು ಜಾರಿ ನೀರಿಗೆ ಬಿದ್ದಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ನಡೆದಿದೆ.
ನೀರಿಗೆ ಬಿದ್ದ ಯುವಕನನ್ನು ಭದ್ರಾವತಿ ಮೂಲದ 23 ವರ್ಷದ ಶರತ್ ಕುಮಾರ್ ಎಂದು ಗುರುತಿಸಲಾಗಿದೆ. ಭಾನುವಾರ ಸ್ನೇಹಿತನೊಂದಿಗೆ ಕೊಲ್ಲೂರಿಗೆ ಬಂದಿದ್ದ ಶರತ್, ಅರಶಿನಗುಂಡಿ ಜಲಪಾತಕ್ಕೆ ಹೋಗಿದ್ದರು. ಬಂಡೆಯ ಮೇಲೆ ನಿಂತು ವಿಡಿಯೋ ಮಾಡುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ. ಭದ್ರಾವತಿಯಿಂದ ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಯುವಕ ಅರಶಿನಗುಂಡಿ ಜಲಪಾತ ವೀಕ್ಷಣೆಗೆಂದು ತೆರಳಿದ್ದರು.

ಜೊತೆಯಲ್ಲಿದ್ದ ಸ್ನೇಹಿತ ತಕ್ಷಣ ಸಮೀಪದ ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ತಿಳಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳೀಯರ ಸಹಕಾರದಿಂದ ಹುಡುಕಿದರೂ ಇದುವರೆಗೆ ಮೃತ ದೇಹ ಪತ್ತೆಯಾಗಿಲ್ಲ ಘಟನಾ ಸ್ಥಳಕ್ಕೆ ಕೊಲ್ಲೂರು ಪಿಎಸ್‌ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



