ಮಕ್ಕಳು ಏನು ಕೇಳಿದರೂ ಇಲ್ಲ ಎಂದು ಕೊಡುವ ತಾಯಿ, ತನ್ನ ಜೀವನವನ್ನೇ ಕೊನೆವರೆಗೂ ಮುಡಿಪಾಗಿ ಇಡುತ್ತಾಳೆ. ಮಕ್ಕಳು ಎದ್ರೂ, ಬಿದ್ರೂ, ಬಟ್ಟೆ ಗಲಿಜು ಆದರೂ ಕ್ಷಣದಲ್ಲೇ ಸ್ವಚ್ಛ ಮಾಡಿ ಮಡಿಲಲ್ಲಿ ಮಲಗಿಸ್ತಾಳೆ. ಮಕ್ಕಳ ಬೆಳವಣಿಗೆ ನೋಡಿ ತಾಯಿ ಖುಷಿ ಪಟ್ಟರೇ, ವಯಸ್ಸಿಗೆ ಬಂದ ಮಕ್ಕಳು ಈಗೀಗ ತಾಯಿಯನ್ನ ಬೀದಿಯಲ್ಲಿ ಬಿಟ್ಟು ಹೋಗುತ್ತಿರುವುದು ಕಣ್ಣಲ್ಲಿ ನೀರು ತರಿಸುತ್ತವೆ. ಇಂತಹ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ.

70 ರಿಂದ 80 ವರ್ಷ ಇರುವ ವೃದ್ಧೆ ತಾಯಿಯೊಬ್ಬರನ್ನು ಆಕೆಯ ಮಗನೇ ಮಂಡ್ಯದ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದಾನೆ. ಕಿರಾತಕ ಮಗನ ಕೃತ್ಯಕ್ಕೆ ತಾಯಿ ಅನಾಥಳಾಗಿ ರಸ್ತೆ ಬದಿಯಲ್ಲಿ ಕುಳಿತುಕೊಂಡಿದ್ದಳು. ಇದನ್ನೂ ಯಾರೋ ವಿಡಿಯೋ ಮಾಡಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ತಾಯಿನ ಬಿಟ್ಟು ಹೋದ ಪಾಪಿ ಮಗನಿಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ತಾಯಿನ ಅನಾಥಳನ್ನಾಗಿ ಪಾಪಿ ಮಗ ಪರಾರಿಯಾಗಿದ್ದಾನೆ. ವೃದ್ಧೆಯನ್ನು ನೋಡಿ ತಡೆಯಲಾಗದೇ ಸ್ಥಳೀಯರೇ ಆಹಾರ ನೀಡಿದ್ದಾರೆ. ಇದಾದ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ವೃದ್ಧೆಯನ್ನ ರಕ್ಷಣೆ ಮಾಡಲಾಗಿದ್ದು ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ವೃದ್ಧಗೆ ಚಿಕಿತ್ಸೆ ನೀಡಲಾಗುತ್ತಿದೆ.



