ಉಡುಪಿ ನಗರದಲ್ಲಿ ಬಾಡಿಗೆ ಮಾಡುವ ವಿಚಾರದಲ್ಲಿ ಹಲವು ಸಮಯಗಳಿಂದ ಆಟೋ ಯೂನಿಯನ್ ಗಳ ಮಧ್ಯೆಯೇ ಗಲಾಟೆಗಳು ನಡೆಯುತ್ತಿರುತ್ತವೆ.

ಅದರ ಮುಂದುವರೆದ ಭಾಗವಾಗಿ ಕೆಲವು ಚಾಲಕರು ಸೇರಿ ಓರ್ವ ಚಾಲಕನಿಗೆ ಗಂಭೀರ ಹಲ್ಲೆ ನಡೆಸಿದ್ದಾರೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಗರದ ಬಿಗ್ ಬಝಾರ್ ಸಮೀಪದ ಪಾರ್ಕಿಂಗ್ ನಲ್ಲಿ ಹಲ್ಲೆ ನಡೆದಿದ್ದು, ಪ್ರಸಾದ್ ಎಂಬ ಆಟೋ ಚಾಲಕ ಗಾಯಗೊಂಡಿದ್ದರೆ. ರಾಘು ಮತ್ತು ಸಹಚರರು ಹಲ್ಲೆ ನಡೆಸಿದ್ದಾಗಿ ಸಹೋದ್ಯೋಗಿಗಳು ಆರೋಪಿಸಿದ್ದಾರೆ. ಇದೀಗ ಗಾಯಗೊಂಡ ಆಟೋ ಚಾಲಕ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು ಹತ್ತಾರು ಚಾಲಕರು ಆಸ್ಪತ್ರೆ ಬಳಿ ನೆರೆದು ನ್ಯಾಯಕ್ಕಾಗಿ ಆಗ್ರಹ ಮಾಡಿದ್ದಾರೆ.

ಘಟನೆ ಸಂಬ0ಧ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ನಗರದೊಳಗೇ ನಮಗೆ ಬಾಡಿಗೆ ಮಾಡಲು ಬಿಡುತ್ತಿಲ್ಲ. ನಗರದೊಳಗೆ ಐದು ಯೂನಿಯನ್ ಗಳಿವೆ. ಅವರವರ ಸಂಘ ಅವರವರಿಗೆ. ಈ ಹಿಂದೆ ಕೂಡ ಹಲ್ಲೆ ನಡೆದಿದೆ. ನಾವೆಲ್ಲಿಗೆ ಹೋಗಬೇಕು? ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಿ ಬೇಕಿದ್ದರೂ ಬಾಡಿಗೆ ಮಾಡಬಹುದು ಎಂದು ಪೊಲೀಸ್ ಇಲಾಖೆ ,ನಗರಸಭೆ ಈಗಾಗಲೇ ಅನುಮತಿ ಕೊಟ್ಟಿದೆ. ಆದರೂ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ವಿಷಯವನ್ನು ಶಾಸಕರು ಮತ್ತಿತರರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಮಗೆ ನ್ಯಾಯ ಬೇಕು ಎಂದು ಆಟೋ ಚಾಲಕರು ಒತ್ತಾಯ ಮಾಡಿದ್ದಾರೆ.



