2020ರಲ್ಲಿ ಮುಲ್ಕಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ನಿಂದ ಜಾಮೀನು ರದ್ದಾಗಿದ್ದರೂ ನಕಲಿ ಪಾಸ್ ಪೋರ್ಟ್ ಬಳಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಮೊಹಮ್ಮದ್ ಮುಸ್ತಫಾ ಆಲಿಯಾಸ್ ಮುಸ್ತಾ ಎಂದು ಗುರುತಿಸಲಾಗಿದೆ.

ಆರೋಪಿ ಮೊಹಮ್ಮದ್ ಮುಸ್ತಫಾ 2020ರ ಜೂನ್ 5 ರಂದು ಮುಲ್ಕಿಯ ವಿಜಯ ಸನ್ನಿದಿ ಹೆದ್ದಾರಿ ಬಳಿ ಹಾಡಹಗಲೇ ರಸ್ತೆಯಲ್ಲಿ ಅಬ್ದುಲ್ ಲತೀಫ್ ಎಂಬವನನ್ನು ಇತರ ಆರೋಪಿಗಳೊಂದಿಗೆ ಸೇರಿ ಕೊಲೆ ಮಾಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದಾವೂದ್ ಹಕೀಂ, ಮೊಹಮ್ಮದ್ ಮುಸ್ತಾಫ ಸೇರಿ ಒಟ್ಟು 10 ಮಂದಿ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಆರೋಪಿಗೆ 2020ರ ಅಕ್ಟೋಬರ್ 10 ರಂದು ಹೈಕೋರ್ಟ್ ಜಾಮೀನು ನೀಡಿತ್ತು. 2022ರ ಏಪ್ರಿಲ್ 22ರಂದು ಕೋರ್ಟ್ ಆತನ ಜಾಮೀನು ರದ್ದುಪಡಿಸಿತ್ತು. ಆದರೆ ಆರೋಪಿ ಮುಸ್ತಫಾ ನಕಲಿ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ಪರಾರಿಯಾಗಿದ್ದು ಮೂರು ವರ್ಷ ಒಮಾನ್ ದೇಶದಲ್ಲಿ ಉಳಿದುಕೊಂಡಿದ್ದ ಆರೋಪಿ ಈಗ ಅಕ್ರಮವಾಗಿ ಒಮನ್ ದೇಶದಿಂದ ನೇಪಾಳದ ಮೂಲಕ ಭಾರತಕ್ಕೆ ಪ್ರವೇಶಿಸಿದ್ದು ಅಲ್ಲಿಂದ ಮುಲ್ಕಿಗೆ ಬಂದಿದ್ದ. ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಕುರಿತು ಸುಳಿವು ಪಡೆದ ಪೊಲೀಸರ ವಿಶೇಷ ತಂಡ ಮೂಲ್ಕಿಯ ಪಕ್ಷಿಕೆರೆ ಬಳಿ ಆತನನ್ನು ಬಂಧಿಸಿದೆ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಆರೋಪಿ ನಕಲಿ ಪಾಸ್ ಪೋರ್ಟ್ ಹೊಂದಿರುವ ಬಗ್ಗೆ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನ ವಿರುದ್ಧ ಮೂಲ್ಕಿ ಠಾಣೆಯಲ್ಲಿ 4 ಮತ್ತು ಇತರೆ ಜಿಲ್ಲೆಯಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿವೆ. ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ಠಾಣೆಗಳಲ್ಲಿ ಮುಸ್ತಫ ವಿರುದ್ಧ ಎರಡು ಪ್ರಕರಣಗಳಲ್ಲಿ ವಾರಂಟ್ ಜಾರಿಯಾಗಿತ್ತು.



