ಹೆಜಮಾಡಿ ಟೋಲ್ ಪ್ಲಾಝಾದ ಬಳಿ ಪಾರ್ಕ್ ಮಾಡಲಾದ ಲಾರಿಯೊಂದರ ಹಿಂಬದಿಗೆ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ಸಂಭವಿಸಿದೆ.

ಕೋಡಿಕರೆ ನಿವಾಸಿ 43 ರ ಹರೆಯದ ಲೋಕೇಶ್ ಹಾಗೂ ಕುಳಾಯಿ ನಿವಾಸಿ 29ರ ಹರೆಯದ ವಿರಾಜ್ ಗಾಯಗೊಂಡಿದ್ದಾರೆ. ಇವರು ಕಾರ್ಯಕ್ರಮಕ್ಕೆ ತೆರಳಿ ಬೆಳಗ್ಗಿನ ಜಾವ ವಾಪಾಸಾಗುತ್ತಿದ್ದಾಗ, ಈ ಘಟನೆ ನಡೆದಿದೆ. ಮರದ ದಿಮ್ಮಿಗಳನ್ನು ಹೇರಿಕೊಂಡಿದ್ದ ಲಾರಿಯನ್ನು ಹೆಜಮಾಡಿ ಟೋಲ್ ಗೇಟಿನ ಕೆಲವೇ ಮೀಟರ್‌ಗಳ ಅಂತರದಲ್ಲಿ ಪಾರ್ಕ್ ಮಾಡಲಾಗಿತ್ತು. ಇದನ್ನು ಗಮನಿಸದ ಕಾರು ಚಾಲಕ ಹಿಂಬದಿಯಿಂದ ಗುದ್ದಿದ್ದಾನೆ. ಡಿಕ್ಕಿಯ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಸಿಲುಕಿಕೊಂಡಿದ್ದ ವಿರಾಜ್‌ರನ್ನು ಹೊರತೆಗೆಯಲು ಸ್ಥಳೀಯರು ಮತ್ತು ಟೋಲ್ ಸಿಬ್ಬಂದಿ ಸುಮಾರು ಒಂದು ಗಂಟೆಗಳ ಕಾಲ ಶ್ರಮಿಸಿದ್ದಾರೆ ಎಂದು ತಿಳಿದು ಬಂದಿದೆ.

ಗಾಯಾಳುಗಳಿಬ್ಬರನ್ನೂ ಮಂಗಳೂರಿನ ಎಜೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸಿದ್ದಾರೆ. ಕೋಡಿಕರೆ ನಿವಾಸಿ ಲೋಕೇಶ್ ಅವರು ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸ್ಥಾಪಕಧ್ಯಕ್ಷ ಮತ್ತು ಹಿಂದೂ ಸಂಘಟನೆಯ ಮುಖಂಡರು ಆಗಿದ್ದು, ಅಪಾರ ಯುವಕರ ತಂಡದ ಅಭಿಮಾನಿಗಳು ಇದ್ದಾರೆ.



