ಶನಿವಾರ ರಾತ್ರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಜಿಲ್ಲೆಯ ನದಿ, ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗಾಳಿ ಮಳೆಗೆ ಈವರೆಗೆ 50ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. 300ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕಚ್ಚಿದೆ. 10ಕ್ಕೂ ಅಧಿಕ ಟ್ರಾನ್ಸ್ಫಾರ್ಮರ್ಗಳು ಕೆಟ್ಟು ಹೋಗಿವೆ. ತೋಟಗಾರಿಕಾ ಬೆಳೆಗಳು ಭೂಸ್ಪರ್ಶಿಸಿದರೆ, ನದಿಗಳ ಪ್ರವಾಹದಿಂದ ಅಲ್ಲಲ್ಲಿ ಭತ್ತದ ಬೆಳೆ ಪ್ರವಾಹಕ್ಕೆ ಕೊಚ್ಚಿಹೋಗಿದೆ.

ಜಿಲ್ಲಾಡಳಿತದಿಂದ ತೆರೆದಿರುವ 5 ಕಾಳಜಿ ಕೇಂದ್ರಗಳಿಗೆ 35ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಎಡೆಬಿಡದೆ ಸುರಿಯುತ್ತಿರುವ ಜೋರು ಮಳೆಯಿಂದಾಗಿ ಕುಮಾರಧಾರಾ ನದಿ ನೀರಿನ ಮಟ್ಟ ಏರುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ನದಿ ನೀರಿಗೆ ತೀರ್ಥಸ್ನಾನಕ್ಕೆ ಹೋಗದಂತೆ ದೇವಾಲಯದ ಭಕ್ತರಿಗೆ ಸೂಚನೆಯನ್ನು ನೀಡಲಾಗಿದೆ. ಭಕ್ತರು ಸ್ನಾನಘಟ್ಟಕ್ಕೆ ಇಳಿಯದಂತೆ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ ಸ್ನಾನ ಘಟ್ಟದ ಬಳಿ ಕಾವಲು ಕಾಯುತ್ತಿದ್ದಾರೆ.

ದ.ಕ., ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್: ದ.ಕ.ದಲ್ಲಿ ಆರೆಂಜ್ ಅಲರ್ಟ್ ನಡೆಯಲಿದೆ. ಮುಂದಿನ 2 ದಿನಗಳ ಕಾಲ ಜಿಲ್ಲೆಯಲ್ಲಿ ಕರಾವಳಿಯಲ್ಲಿ ಗಂಟೆಗೆ 40-45 ಕಿ.ಮೀ. ಬಲವಾದ ಗಾಳಿ ಬೀಸುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಜು.24, 25ರಂದು ಆರೆಂಜ್ ಅಲರ್ಟ್ ನೀಡಲಾಗಿದ್ದು, ಜು.25ರಿಂದ 28ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಸಂಪರ್ಕ ಸಂಖ್ಯೆ: ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆಯ ಟೋಲ್ ಫ್ರೀ ಸಂಖ್ಯೆ 1077 ಅಥವಾ ನಿಯಂತ್ರಣ ಕೊಠಡಿ ಸಂಖ್ಯೆ 0824-2442590 ಅನ್ನು ಸಂಪರ್ಕಿಸಬಹುದು.








