ದ.ಕ.ಜಿಲ್ಲಾಡಳಿತ, ಪೊಲೀಸ್ ಇಲಾಖೆ ತೆಗೆದುಕೊಂಡಿರುವ ತೀರ್ಮಾನಗಳಿಂದ ಜಿಲ್ಲೆಯಲ್ಲಿ ಕೆಂಪು ಕಲ್ಲು, ಮರಳು ಪೂರೈಕೆಯಲ್ಲಿ ತೀವ್ರ ತೊಂದರೆ ಉಂಟಾಗಿದ್ದು ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತವಾಗಿದೆ.

ಇದರಿಂದ ಕಾರ್ಮಿಕರು, ಗುತ್ತಿಗೆದಾರರು, ಸಾರ್ವಜನಿಕರಿಗೆ ತೀವ್ರ ಸಮಸ್ಯೆಯುಂಟಾಗಿ ಕೆಲಸವೇ ಇಲ್ಲದ ವಾತಾವರಣ ನಿರ್ಮಾಣವಾಗಿದ್ದಲ್ಲದೇ, ಅಭಿವೃದ್ಧಿ ಕಾರ್ಯಗಳಿಗೂ ತೀವ್ರ ಹಿನ್ನಡೆಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುಂಚೆ ಮರಳು ನೀತಿ ಮಾಡುತ್ತೇವೆ ಅಂತ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗುತ್ತಾ ಬಂದರೂ ಈ ಬಗ್ಗೆ ಸ್ಪಷ್ಟ ಕಾನೂನು ರೂಪಿಸಿಲ್ಲವಾದ್ದರಿಂದ ಈಗಲೂ ಸಹ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಮರಳು ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರ ಒಂದಾದರೂ ಸಭೆ ನಡೆಸಿದೆಯಾ? ಕ್ಷೇತ್ರದ ಶಾಸಕನಾಗಿರುವ ನನಗಂತೂ ಈ ಬಗ್ಗೆ ಯಾವ ಮಾಹಿತಿಯೂ ಬಂದಿಲ್ಲ. ಕೇರಳದಲ್ಲಿ ಒಂದು ಟನ್ ಕೆಂಪು ಕಲ್ಲಿಗೆ 32 ರೂ. ರಾಯಲ್ಟಿ ಇದ್ದರೆ, ಕರ್ನಾಟಕದಲ್ಲಿ 282 ರೂ. ಇದೆ. ಹಾಗಾಗಿ ಕೇರಳದಿಂದ ಉಳ್ಳಾಲ ಕಡೆಗೆ ಅಕ್ರಮ ಸಾಗಾಟ ನಡೆಯುತ್ತಿರುವ ಬಗ್ಗೆ ಮಾಹಿತಿಯೂ ಇದೆ. ಹೀಗೆ ನಮ್ಮ ಜಿಲ್ಲೆಯಲ್ಲಿ ಸಮಸ್ಯೆಗಳ ಸರಮಾಲೆ ಮೂಲಕ ತೀವ್ರ ಆರ್ಥಿಕ ಸಂಕಷ್ಟ ತಂದಿರುವುದು ಕಾಂಗ್ರೆಸ್ಸಿನ ಮತ್ತೊಂದು ಗ್ಯಾರಂಟಿ ಎಂದಿದ್ದಾರೆ.



