ಖಾಸಗಿ ಬಸ್ಸಿನಿಂದ ಬಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕೊಡಂಗೆ ನಿವಾಸಿ 43 ವರ್ಷದ ಚಿದಾನಂದ ರೈ ಮೃತಪಟ್ಟಿದ್ದಾರೆ.

ಜು.7ರಂದು ಬೆಳಗ್ಗೆ ವಿಟ್ಲ -ಮುಡಿಪು- ಮಂಗಳೂರು ದಾರಿಯಲ್ಲಿ ಸಂಚರಿಸುವ ಖಾಸಗಿ ಬಸ್ಸಿಗೆ ಕೊಡಂಗಾಯಿ ಎಂಬಲ್ಲಿ ಏರಿದ್ದ ಚಿದಾನಂದ ಅವರು ಕುಡ್ತಮುಗೇರು ನಿಲ್ದಾಣ ತಲುಪುತ್ತಿದ್ದಂತೆ ಮೆಟ್ಟಿಲಿನಲ್ಲಿ ನಿಂತಿದ್ದು ಅವರು ಆಯತಪ್ಪಿ ರಸ್ತೆಗೆ ಬಿದ್ದು ಸಣ್ಣಪುಟ್ಟ ಗಾಯಗೊಂಡಿದ್ರು. ಬಸ್ಸಿನ ಸಿಬ್ಬಂದಿ ಉಪಚರಿಸಲು ಮುಂದಾದಾಗ ನನಗೇನೂ ಆಗಿಲ್ಲ ಎಂದು ಬಸ್ಸನ್ನು ತೆರಳುವಂತೆ ಸೂಚಿಸಿದ್ದಾರೆ. ಸಾಯಂಕಾಲದ ವೇಳೆ ಚಿದಾನಂದ ಅವರು ಹಠಾತ್ ಅಸ್ವಸ್ಥಗೊಂಡಿದ್ರು. ಸ್ಥಳೀಯರು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಜು.8ರಂದು ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



