ಬಂಟ್ವಾಳ: ಅಪಹರಣ ಮತ್ತು ವಂಚನೆ ಪ್ರಕರಣದ ಆರೋಪಿಯೋರ್ವ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ತಲೆಮರೆಸಿಕೊಂಡಿದ್ದಾತನನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಡೆದಿದೆ.

ಬಂಟ್ವಾಳ ಮಂಚಿ ನಿವಾಸಿ ಹಿದಾಯತ್ ಯಾನೆ ಅಬ್ದುಲ್ ಎಂಬಾತ ಆರೋಪಿಯಾಗಿದ್ದು ಇದೀಗ ಜೈಲಿಗೆ ಹೋಗಿದ್ದಾನೆ.2007 ರಲ್ಲಿ ನಡೆದ ಅಪಹರಣ ಮತ್ತು ವಂಚನೆ ಪ್ರಕರಣದ ಆರೋಪಿಯಾಗಿದ್ದ ಈತ ಜೈಲುವಾಸ ಅನುಭವಿಸಿ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಷರತ್ತಿನ ಮೇಲೆ ಬಿಡುಗಡೆಯಾದ ಬಳಿಕ ನ್ಯಾಯಾಲಯದ ಅದೇಶವನ್ನು ಉಲ್ಲಂಘಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಕೇರಳದ ಮಂಜೇಶ್ವರದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.



