ದೃಢ ಸಂಕಲ್ಪ ಮತ್ತು ಆತ್ಮವಿಶ್ವಾಸವಿದ್ದರೆ ಸಾಧನೆಯ ಶಿಖರವೇರಲು, ಸಾಧಿಸಿ ಸೈ ಎನಿಸಿಕೊಳ್ಳಲು ಯಾವ ವಯಸ್ಸಿನ ಪರಿಮಿತಿಯು ಇರುವುದಿಲ್ಲ. ಈ ಮಾತಿಗೆ ನಿದರ್ಶನವೆಂಬಂತೆ ಮಂಗಳೂರು ಮೂಲದ ಅನಿಲ್ ಕುಮಾರ್ ಮತ್ತು ಶ್ರೀಮತಿ ಶೈಲಜಾ ದಂಪತಿಯ ಸುಪುತ್ರಿ ಏಳರ ಪೋರಿ ಸುಭಿಕ್ಷ ಅನಿಲ್ ನಮ್ಮ ಕಣ್ಣ ಮುಂದೆ ನಿಲ್ಲುತ್ತಾಳೆ.

ನೃತ್ಯ, ಚಿತ್ರಕಲೆ, ಗಾಯನ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಕಿರಿವಯಸ್ಸಿನಲ್ಲಿಯೇ ಸಾಧನೆಗೆ ಮುತ್ತಿಕ್ಕಿರುವ ಸುಭಿಕ್ಷ ಪ್ರಸ್ತುತ ಮುಂಡುಗೋಡದ ಬ್ಲೂಮಿಂಗ್ ಬರ್ಡ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.

ಮೂರನೇ ವಯಸ್ಸಿನಿಂದಲೇ ಭರತನಾಟ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಈ ಕಿರಿಸಾಧಕಿ ನಾಟ್ಯಮಯೂರಿ ನೃತ್ಯ ಕಲಾಕೇಂದ್ರದ ಶ್ರೀಮತಿ ಶಶಿರೇಖಾ ಬೈಜು ಗರಡಿಯಲ್ಲಿ ಪಳಗಿದ್ದಾಳೆ. ಇನ್ನೂ ಸಂಗೀತವನ್ನು ಶ್ರೀಮತಿ ರೇಖಾ ಮರಾಟೆ ಬಳಿಯಲ್ಲಿ ಮತ್ತು ಕರಾಟೆಯನ್ನು ಸುರೇಂದ್ರ ನಾಸರ್ಗಿ ಗರಡಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ಯೋಗಾಸನದ ಎರಡು ಭಂಗಿಗಳಲ್ಲಿ ಗೀಸಾ ಬುಕ್ ಆಫ್ ರೆಕಾರ್ಡ್ ಮಾಡಿರುವ ಈ ಕಿರಿಸಾಧಕಿ ಹತ್ತು ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ.

ವಾಯ್ಸ್ ಆಫ್ ಆರಾಧನ ತಂಡದ ಸಕ್ರಿಯ ಸದಸ್ಯೆ ಯಾಗಿರುವ ಸುಭಿಕ್ಷಾ ಪ್ರತಿಭೆಗೆ ಸೇವಾ ರತ್ನ ಪ್ರಶಸ್ತಿ, ಕಲಾ ರತ್ನ ಪ್ರಶಸ್ತಿ, ಸುವರ್ಣ ಕರ್ನಾಟಕ ನಾಟ್ಯಮಯೂರಿ ಬಾಲ ಗೌರವ ರಾಜ್ಯ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳು ಲಭಿಸಿವೆ.



