ಪ್ರತೀ ತಾಲೂಕಿನಲ್ಲೂ ಅಗ್ನಿಶಾಮಕ ಠಾಣೆ ನಿರ್ಮಾಣದ ಯೋಜನೆಯಿದ್ದು, ಈಗಾಗಲೇ 200ಕ್ಕೂ ಹೆಚ್ಚು ಠಾಣೆಗಳು ರಾಜ್ಯದಲ್ಲಿ ಇದ್ದು ಇನ್ನು 30 -40 ಠಾಣೆಗಳನ್ನು ಹಂತ ಹಂತವಾಗಿದೆ ಮಂಜೂರು ಮಾಡಲಾಗಿದೆ. ಈ ಭಾಗದ ಜನರ ಬೇಡಿಕೆಯಂತೆ ಉಳ್ಳಾಲ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದ್ದು, ದ.ಕ ಜಿಲ್ಲೆಯ ಮೂಲ್ಕಿ ಹಾಗೂ ಕಡಬ ತಾಲೂಕಿನಲ್ಲೂ ಶೀಘ್ರದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣವಾಗಲಿದೆ ಎಂದು ಕರ್ನಾಟಕ ರಾಜ್ಯದ ಗೃಹಸಚಿವ ಡಾ.ಪರಮೇಶ್ವರ್ ಹೇಳಿದ್ದಾರೆ.

ಅವರು ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ಕಂಬಳಪದವು ಬಳಿ ನೂತನವಾಗಿ ನಿರ್ಮಾಣವಾಗಲಿರುವ ಅಗ್ನಿಶಾಮಕ ಠಾಣೆಗೆ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದ್ರು. ಅಗ್ನಿಶಾಮಕ ಮತ್ತು ತುರ್ತುಸೇವೆ ಇಲಾಖೆಯ ಸಿಬ್ಬಂದಿಗಳ ಸೇವೆ, ಪರಿಶ್ರಮ ಬಹಳ ಮುಖ್ಯವಾದದ್ದು. ಎಲ್ಲರನ್ನು ರಕ್ಷಣೆಗಾಗಿ ಅಗ್ನಿಶಾಮಕ ದಳ ತಮ್ಮ ಜೀವವನ್ನು ಅಡವಿಟ್ಟು ಬೇರೆಯವರ ರಕ್ಷಣೆ ಮಾಡುತ್ತಾರೆ. ಇಂದಿನ ಆಧುನಿಕತೆಗೆ ಪೂರಕವಾಗಿ ಅನಾಹುತ ಸಂಭವಿಸಿದಾಗ ಜನರ ರಕ್ಷಣೆಗೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಅತ್ಯಾಧುನಿಕ ಯಂತ್ರಗಳು ಹಾಗೂ ಸೌಲಭ್ಯವನ್ನು ಇಲಾಖೆಗೆ ಒದಗಿಸುತ್ತಿದ್ದೇವೆ. ಹಾಗೆಯೇ ನೂತನ ಅಗ್ನಿಶಾಮಕ ವಾಹನ ಖರೀದಿಗೆ 50 ಕೋಟಿ ರೂ.ವನ್ನು ಮುಖ್ಯಮಂತ್ರಿಗಳು ಈಗಾಗಲೇ ಮಂಜೂರು ಮಾಡಿದ್ದಾರೆ. ಕೆಮಿಕಲ್ ಇಂಡಸ್ಟ್ರಿ, ಪೆಟ್ರೋಲ್ ಇಂಡಸ್ಟ್ರಿ ಈ ಭಾಗದಲ್ಲಿ ಇರುವುದರಿಂದ ಈ ಭಾಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದಿದ್ದಾರೆ.



