ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ 1975ರ ಜುಲೈ 10ರಂದು ಅನ್ನಪೂರ್ಣ ಕ್ಯಾಂಟೀನ್ ಆರಂಭವಾಗಿತ್ತು. ಅದಕ್ಕೀಗ 50 ವರ್ಷ ಪೂರ್ಣಗೊಂಡಿದೆ. ಹೋಟೆಲ್ ಉದ್ಯಮ ಮತ್ತು ಸಾರ್ವಜನಿಕ ಒಡನಾಟ ಆರಂಭಿಸಿ, 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೋಟೆಲ್‌ನ ಗ್ರಾಹಕರಿಗೆ, ಸಾರ್ವಜನಿಕರಿಗೆ ಉಚಿತವಾಗಿ ತಿಂಡಿ, ಊಟ ವಿತರಿಸಲಾಯಿತು.

ಮಣಿಪಾಲ ಪೈ ಕುಟುಂಬ ಮತ್ತು ಉದ್ಯಾವರ ರಾಘವೇಂದ್ರ ಕಿಣಿ ಸಹಕಾರದಲ್ಲಿ ಆರಂಭವಾದ ಕ್ಯಾಂಟೀನನ್ನು, ನಾರಾಯಣ ಪ್ರಭು, ಮಾಧವ ಪ್ರಭು, ವಸಂತ ಪ್ರಭು, ದೇವೇಂದ್ರ ಪ್ರಭು ಎಂಬ ಸಹೋದರರು ನಡೆಸಿಕೊಂಡು ಬಂದಿದ್ದಾರೆ. 5 ಪೈಸೆ, 10 ಪೈಸೆ ಕಾಲದಲ್ಲಿ ಮಣಿಪಾಲ ಕೆಎಂಸಿಗೆ ಬರುವ ರೋಗಿಗಳು, ವಿದ್ಯಾರ್ಥಿಗಳ ಹೊಟ್ಟೆ ತಣಿಸುತ್ತಿತ್ತು. ಇಂದಿಗೂ ಇತರೆ ಹೊಟೆಲ್ ಗಳಿಗೆ ಹೋಲಿಸಿದರೆ ತಿಂಡಿ , ಊಟದ ರೇಟ್ ಬಹಳ ಕಮ್ಮಿಯಿದೆ. ಕ್ಯಾಂಟಿನ್‌ಗೆ 50 ವರ್ಷ ತುಂಬಿದ ಹಿನ್ನಲೆ ಬೆಳಗ್ಗೆ ಮಧ್ಯಾಹ್ನ ಸಂಜೆ ಸುಮಾರು ನಾಲ್ಕು ಸಾವಿರ ಜನ ಗ್ರಾಹಕರು, ಸಾರ್ವಜನಿಕರು, ಆಪ್ತರಿಗೆ ಉಚಿತ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಇಡ್ಲಿ ಸಾಂಬಾರ್, ಉಪ್ಪಿಟ್ಟು, ಕೇಸರಿಬಾತ್, ಪೋಡಿ, ವಡೆ ಚಹಾ ಕಾಫಿ ವಿತರಿಸಲಾಯಿತು. ಮಧ್ಯಾಹ್ನ ಉಪ್ಪಿನಕಾಯಿ, ಎರಡು ಪಲ್ಯ, ಗಸಿ,ಅನ್ನ ಸಾರು, ಪಾಯಸ ಮಜ್ಜಿಗೆಯನ್ನು ಸಾವಿರಕ್ಕೂ ಮಿಕ್ಕಿ ಜನಕ್ಕೆ ವಿತರಣೆ ಮಾಡಲಾಯ್ತು. ಸಂಜೆ ತಿಂಡಿ ವ್ಯವಸ್ಥೆ ಮಾಡಲಾಗಿದ್ದು, 50 ವರ್ಷದಿಂದ ಹೋಟೆಲ್ ನಲ್ಲಿ ಕೆಲಸ ಮಾಡಿದ ಸಿಬ್ಬಂದಿಗೆ ಸನ್ಮಾನ ಕೂಡ ನಡೆದಿದೆ.



