ನಗರವನ್ನು ಸೇರುವ ಮುಖ್ಯರಸ್ತೆಯ ಪಕ್ಕದ ಬಂಜರು ಭೂಮಿಯಲ್ಲಿದ್ದ ಸಣ್ಣ ಚಹಾದ ಅಂಗಡಿಯಲ್ಲಿ ಹುಡುಗನೊಬ್ಬ ಚಹಾ ಮಾರುತ್ತಿದ್ದ. ಭರವಸೆಗಳೇ ಬತ್ತಿಹೋದ ಅವನ ಮುಖದಲ್ಲಿ ಭಾವನೆಗಳ ಕುರುಹಂತೂ ಮೊದಲೇ ಇರಲಿಲ್ಲ. ಕಂಬಕ್ಕೆ ನೇತುಹಾಕಿದ ತಂದೆ-ತಾಯಿಯ ಭಾವಚಿತ್ರ, “ನೀ ಅನಾಥನಲ್ಲ ನಾವಿದ್ದೇವೆ” ಎಂದು ಅವನೆಡೆಗೆ ಸನ್ನೆ ಮಾಡುತ್ತಿತ್ತು. ಎಲ್ಲರನ್ನೂ ಎಲ್ಲವನ್ನೂ ಕಳೆದುಕೊಂಡ ಆ ಎಳೆ ಮನಸ್ಸಿನಲ್ಲಿ ನೂರಾರು ಕನಸುಗಳು ಸಮಾಧಿಯಾಗಿತ್ತು, ಒಬ್ಬಂಟಿತನದ ಚಿಗುರು ಮಾತ್ರ ಬೆಳೆದು ಹೆಮ್ಮರವಾಗಿತ್ತು. ಹವ್ಯಾಸ, ಆಸಕ್ತಿಯ ಪರಿಯಲ್ಲಿ ಗೀಚಿದ ಬರಹಗಳ ಕಂತೆಯೊಂದು ಬೀಸುವ ಗಾಳಿಗೆ ಸದಾ ಪುಟ ತಿರುವುತ್ತಿತ್ತು.
ಬಡತನದ ತೀವ್ರತೆ ಎಷ್ಟಿತೆಂದರೆ ತನ್ನ ಪ್ರತಿಬಿಂಬ ಕಾಣಲು ಉಣ್ಣುವ ಗಂಜಿಯ ಬಟ್ಟಲೇ ಕನ್ನಡಿಯಾಗಿತ್ತು. ಕೆಲವೊಮ್ಮೆ ಮಾರಾಟವಾಗದ ಬನ್ನು-ಬ್ರೆಡ್ಡುಗಳೇ ಹೊಟ್ಟೆತುಂಬಿಸುತಿತ್ತು. ಅಪ್ಪ ಬಿಟ್ಟುಹೋದ ಚಹಾದ ವ್ಯಾಪಾರವಂತೂ ದಿನಕ್ಕೆ ಎರಡು ಚಹಾ ಮಾರಾಟವಾದರೇ ಹೆಚ್ಚು ಎಂಬ ಪರಿಸ್ಥಿತಿಗೆ ತಲುಪಿತ್ತು. ಇಂದಲ್ಲ ನಾಳೆ ವ್ಯಾಪಾರದಲ್ಲಿ, ತನ್ನ ಬದುಕಿನಲ್ಲಿ ಸುಧಾರಣೆ ಕಾಣುವ ನಿರೀಕ್ಷೆಯ ಜೊತೆಗೆ ಮುಖ್ಯರಸ್ತೆಯಲ್ಲಿ ಸಾಗುವ ವಾಹನಗಳನ್ನು ನೋಡುವುದರಲ್ಲೇ ರಾಜುವಿನ ದಿನ ಮುಗಿಯುತಿತ್ತು. ಇನ್ನು ರಾತ್ರಿಯಾದರೆ ಸಾಕು ಕಂಡ ಕನಸುಗಳ ಅರಮನೆಯೊಂದು ಕುಸಿಯುವಂತಾಗಿ ನಿದ್ದೆ ಎಂಬುದು ಅವನ ಪಾಲಿಗೆ ಅಪರೂಪವಾಗಿತ್ತು. ಅಂದು ಸೂರ್ಯ ಪೂರ್ವದಲ್ಲೇ ಉದಯಿಸಿದ್ದ, ರಾಜುವಿಗೂ ಕೂಡ ಆ ದಿನ ವಿಶೇಷ ಅನಿಸಿರಲಿಲ್ಲ. ಕಳೆದ 3 ದಿನಗಳಿಂದ ಒಂದು ಚಹಾವೂ ಕೂಡ ಮಾರಾಟವಾಗಿರಲಿಲ್ಲ. ರಾಜು ತನ್ನ ಬದುಕಿನಲ್ಲಿ ಹೊಂದಿದ್ದ ತಾಳ್ಮೆಗೆ ಇದು ಬೇಸರದ ಸಂಗತಿ ಎಂದು ಅವನಿಗೆ ಅನ್ನಿಸಿಯೂ ಇರಲಿಲ್ಲ. ತಾನೇ ಬರೆದ ಬರಹಗಳ ಕಂತೆಯನ್ನು ಬಿಡಿಸಿಟ್ಟು ಏನೋ ಗಾಢ ಚಿಂತೆಯಲ್ಲಿ ಮೈಮರೆತಿದ್ದ.
ಅದೇ ವೇಳೆ ನಗರದೆಡೆಗೆ ಸಾಗುವ ದುಬಾರಿ ಕಾರೊಂದು ಅವನ ಅಂಗಡಿಯ ಮುಂದೆ ಬಂದು ನಿಂತಿತು. ಚಹಾ ಕುಡಿಯಲು ನಿಲ್ಲಿಸಿರಬೇಕು ಎಂದು ರಾಜು ಸುಮಾರು ಹೊತ್ತು ಕಾದರೂ ಕಾರಿನಿಂದ ಯಾರು ಕೂಡ ಕೆಳಗಿಳಿಯಲೇ ಇಲ್ಲ. ಸುಮಾರು ಹೊತ್ತು ಕಾದ ಅವನು ವಿಚಾರಿಸಲು ಕಾರ್ ಬಳಿ ಬಂದಾಗ ನಿಧಾನವಾಗಿ ಕಾರ್ ಡೋರ್‌ನ ಗ್ಲಾಸ್ ಕೆಳಗಿಳಿಯಿತು. ಶ್ರೀಮಂತನಂತೆ ಕಾಣುವ ವ್ಯಕ್ತಿಯೊಬ್ಬ ಫೋನ್ ಕರೆಯಲ್ಲಿ ನಿರತನಾಗಿದ್ದ. ರಾಜುವನ್ನು ಕಂಡವನೆ “ಯಾರಪ್ಪ ನೀನು, ಏನ್ ವಿಷ್ಯ?” ಎಂದು ಪ್ರಶ್ನಿಸಿದ. “ಏನಿಲ್ಲ ಸರ್, ನೀವು ನನ್ ಅಂಗಡೀಲಿ ಚಹಾ ಕುಡಿಯೋಕೆ ಕಾರ್ ನಿಲ್ಸಿದ್ರಿ ಅನ್ಕೊಂಡೆ” ಎಂದ ರಾಜುವಿನ ಮುಖದಲ್ಲಿ ನಿರಾಸೆ ಅನ್ನೋದು ತಾಂಡವ ಆಡುತಿತ್ತು. ಅವನ ಮುಖ ಕಂಡು ಆ ವ್ಯಕ್ತಿಗೆ ಕರುಣೆ ಉಕ್ಕಿಬಂತೋ ಏನೋ, “ನಡಿಯಪ್ಪಾ ಒಂದು ಚಹಾ ಮಾಡು” ಅಂದವನೇ ಕಾರಿನಿಂದ ಕೆಳಗಿಳಿದ. ಹಲವು ದಿನಗಳ ನಂತರ ಆಗುತ್ತಿರುವ ವ್ಯಾಪಾರ ಇದು, ಉತ್ಸಾಹದಿಂದ ರಾಜು ಚಹಾ ಮಾಡುವಲ್ಲಿ ನಿರತನಾದ. ಚಹಾದ ಅಂಗಡಿಯನ್ನು ಕುತೂಹಲದಿಂದ ಗಮನಿಸಿದ ಆ ವ್ಯಕ್ತಿ ರಾಜು ಬರೆದಿದ್ದ ಬರಹಗಳ ಕಂತೆಯನ್ನು ಕೈಗೆತ್ತಿಕೊಂಡ. ಅವುಗಳನ್ನೇ ಓದುತ್ತಾ ಕಳೆದುಹೋಗಿದ್ದ ಅವನನ್ನು “ಸರ್, ನಿಮ್ಮ ಚಹಾ” ಅನ್ನೋ ರಾಜುವಿನ ಧ್ವನಿ ಎಚ್ಚರಿಸಿತು.
“ಎನ್ನಪ್ಪ, ಇದೆಲ್ಲಾ ಯಾರ್ ಬರ್ದಿರೋದು?” ಅಂತ ಆ ವ್ಯಕ್ತಿ ಕೇಳಿದಾಗ ಸಂಕೋಚದಿಂದಲೇ ರಾಜು “ನಾನೇ ಸರ್” ಅಂದ. “ಇಷ್ಟು ಸಣ್ಣ ಹುಡುಗನಲ್ಲಿ ಇಂತಹ ಅಧ್ಭುತ ಬರಹಗಾರ ಅಡಗಿರಲು ಹೇಗೆ ಸಾಧ್ಯ”? ಎಂದು ಆ ವ್ಯಕ್ತಿಯ ಕಣ್ಣುಗಳಲ್ಲಿ ಕಂಡ ಆಶ್ಚರ್ಯವೇ ಪ್ರಶ್ನಿಸುತಿತ್ತು. ರಾಜುವಿನ ಬರಹಗಳಿಗೆ ಅಭಿಮಾನಿಯಾದ ಆ ವ್ಯಕ್ತಿ ಕನ್ನಡ ಚಿತ್ರರಂಗದಲ್ಲಿ ಹೆಸರುಮಾಡಿದ್ದ ಖ್ಯಾತ ಬರಹಗಾರನಾಗಿದ್ದ. ರಾಜುವಿನ ಬದುಕಿನ ದುರಂತಗಳಿಗೆ ಕಿವಿಯಾದ ಅವನು ಭವಿಷ್ಯದಲ್ಲಿ ರಾಜುವಿಗೆ ಆಶ್ರಯದಾತನಾದ. ರಾಜು ಬರೆದ ಬರಹಗಳ ಸಂಕಲನ ಪುಸ್ತಕವಾಗಿ ಪ್ರಕಟವಾಯಿತು. ಕನ್ನಡದ ಪ್ರಬುದ್ಧ ಬರಹಗಾರರ ಪಟ್ಟಿಯಲ್ಲಿ ಮುಂದೆ ರಾಜುವಿನ ಹೆಸರು ಕೂಡ ಸೇರ್ಪಡೆಯಾಯಿತು. ಹೇಗೆ ಬೇಸಿಗೆಯ ಬಿಸಿಲ ಬೇಗೆಯ ನಂತರ ಮಳೆ ಹನಿಗಳ ಸಿಂಚನದಿಂದ ಭುವಿ ತಂಪಾಗುತ್ತದೋ ಅದೇ ರೀತಿ ಬದುಕು ಕೂಡ, ಕಷ್ಟದ ಹಿಂದೆ ಸುಖದ ಸುಳಿವು ಇದ್ದೇ ಇರುತ್ತದೆ. ಕಾಯುವ ತಾಳ್ಮೆಯೊಂದಿದ್ದರೆ ಕಷ್ಟಗಳು ಕ್ಷಣಿಕ ಎನಿಸುತ್ತದೆ, ಸುಖದ ಬದುಕು ನಮಗಾಗಿ ಕಾಯುತ್ತಿರುತ್ತದೆ. ಆದ್ದರಿಂದ ಕಷ್ಟಗಳಿಗೆ ಕಂಗೆಡದ ತಾಳ್ಮೆ ಅತಿಮುಖ್ಯ..!!
ಚೇತನ್ ಕಾಶಿಪಟ್ನ
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…