ಸದ್ಯ ಜಗತ್ತಿನ ಮೂಲೆಮೂಲೆಗಳಿಂದ ಕೇಳಿಬರುತ್ತಿರುವುದು ಒಂದೇ ಶಬ್ದ ಅದು ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ). ಮನುಷ್ಯನ ಬಹುಪಾಲು ಉದ್ಯೋಗಗಳನ್ನು ಕಸಿದುಕೊಂಡಿರುವ ಈ ಕೃತಕ ಬುದ್ಧಿಮತ್ತೆ ದಿನದಿಂದ ದಿನಕ್ಕೆ ಪ್ರಬಲವಾಗಿ ಬೆಳೆಯುತ್ತಿದೆ.

ಹಿಂದೆಲ್ಲಾ ಒಂದೊಳ್ಳೆಯ ಫೋಟೋ ಎಡಿಟ್ ಮಾಡಬೇಕಾದರೆ, ಯಾವುದಾದರೂ ವಿಷಯದ ಬಗ್ಗೆ ವಿವರಗಳು ಬೇಕಾದರೆ ಅಥವಾ ಒಂದೊಳ್ಳೆಯ ಪೋಸ್ಟರ್ ಮಾಡಬೇಕಿದ್ದರೆ ಅವುಗಳಲ್ಲಿ ಪರಿಣಿತಿ ಹೊಂದಿದ ವ್ಯಕ್ತಿಯ ಬಳಿ ಅಂಗಲಾಚಬೇಕಿತ್ತು. ಆದರೀಗ ಅಂತಹ ಪ್ರಸಂಗವೇ ಇಲ್ಲ. ಪರೀಕ್ಷೆ ಎದುರಿಸಲು ಬೇಕಾದ ರೆಡಿಮೇಡ್ ಉತ್ತರಗಳಿಂದ ಹಿಡಿದು ಗ್ರಾಫಿಕ್ ಡಿಸೈನಿಂಗ್, ಅನಿಮೆಷನ್ ನಂತಹ ಸೂಕ್ಷ್ಮ ಕೆಲಸವನ್ನು ಕೂಡ ಎಐ ಮಾಡಿಕೊಡುತ್ತದೆ. ನಮಗೆ ಬರುವ ಅಲ್ಪಸ್ವಲ್ಪ ಇಂಗ್ಲಿಷ್ ನಲ್ಲಿ ನಮಗೆ ಆಗಬೇಕಿರುವ ಕೆಲಸದ ಬಗ್ಗೆ ನಮ್ಮ ಅಯ್ಕೆಯ ಯಾವುದಾದರೊಂದು ಎಐ ವೆಬ್ಸೈಟ್ ನಲ್ಲಿ ವಿವರಗಳನ್ನು ದಾಖಲಿಸಿಬಿಟ್ಟರೆ ಮುಗಿಯಿತು, ಕ್ಷಣಮಾತ್ರದಲ್ಲಿ ನಮ್ಮ ಕೆಲಸ ಮುಗಿದುಹೋಗುತ್ತದೆ.
ಇಂದಿಗೆ ಎಐ ಜಗತ್ತಿನ ಬಹುಪಾಲು ಎಲ್ಲ ಕ್ಷೇತ್ರಗಳಿಗೂ ಲಗ್ಗೆಯಿಟ್ಟು ತನ್ನ ಪ್ರಾಬಲ್ಯ ಸಾಧಿಸಿದೆ. ಬಹುತೇಕ ಕಂಟೆಂಟ್ ಕ್ರಿಯೇಟರ್ಸ್ಗಳ ಕೆಲಸವನ್ನು ಅದು ಸುಗಮಗೊಳಿಸಿದರೆ ಬಹುಪಾಲು ಜನರ ಕೆಲಸವನ್ನು ಅದು ಕಸಿದುಕೊಂಡಿದೆ. ಸಾಹಿತ್ಯ ಕ್ಷೇತ್ರಕ್ಕೂ ಎಐ ಬರಬಹುದಾ? ಬರಹಗಾರರು, ಸ್ಕ್ರಿಪ್ಟ್ ರೈಟರ್ಸ್ ಗಳ ಕೆಲಸಕ್ಕೂ ಎಐ ಕನ್ನ ಹಾಕಬಹುದಾ? ಎಂಬೆಲ್ಲ ಹಾಟ್ ಚರ್ಚೆಗಳು ಜಾಗತಿಕವಾಗಿ ಸದ್ಯ ನಡೆಯುತ್ತಿದೆ. ಪ್ರಬಂಧ, ಆಕರ್ಷಿಸುವ ಸಣ್ಣ ಸಣ್ಣ ಕ್ಯಾಪ್ಶನ್‌ಗಳನ್ನು ಬರೆಯುವುದರಲ್ಲಿ ಎಐ ಈಗಾಗಲೇ ಮುಂಚೂಣಿಯಲ್ಲಿದೆ.

ಆದರೆ ಸಾಹಿತಿಕ ಬರವಣಿಗೆಯಲ್ಲಿ ಎಐ ಇನ್ನೂ ಕೂಡ ಅಂತಹ ಪ್ರಭಾವವೇನು ಬೀರಿಲ್ಲ. ಇಂಗ್ಲಿಷ್ ಭಾಷೆಯನ್ನು ಮೂಲವಾಗಿಸಿಕೊಂಡಿರುವ ಎಐ ಇನ್ನೂ ಕೂಡ ಜಗತ್ತಿನ ವಿವಿಧ ಭಾಷೆಗಳಲ್ಲಿ ಬರಹಗಳನ್ನು ಜನರೇಟ್ ಮಾಡುವಷ್ಟು ಅಭಿವೃದ್ಧಿ ಹೊಂದಿಲ್ಲ. ಒಂದು ವೇಳೆ ಎಐ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡದ್ದೇ ಆದಲ್ಲಿ ಮನುಷ್ಯನ ಜೀವನಾನುಭವ ಮತ್ತು ಭಾವನೆಗಳು ಆ ಬರಹಗಳಲ್ಲಿ ಕಾಣಸಿಗಲು ಸಾಧ್ಯವೇ?, ಗೊತ್ತಿಲ್ಲ ನನ್ನ ಪ್ರಕಾರ ಅದು ಒಂದು ವಿಷಯದ ಕುರಿತು ಬರೆಯಬಹುದು ಆದರೆ ಒಬ್ಬ ಸಾಹಿತಿ ನೀಡುವ ಸಾಹಿತ್ಯದ ಸ್ಪರ್ಶ ಆ ಬರಹಗಳಲ್ಲಿ ನಾವು ಕಾಣಲು ಸಾಧ್ಯವಿಲ್ಲ. ಎಷ್ಟೇ ಪ್ರಬಲವಾಗಿ ಎಐ ತಂತ್ರಜ್ಞಾನ ಬೆಳೆದರೂ ಸಾಹಿತ್ಯ ಕ್ಷೇತ್ರದಲ್ಲಿ ಮನುಷ್ಯನ ಸಣ್ಣ ತಲೆಯಲ್ಲಿ ಹುಟ್ಟಿ ಕಾಲಿ ಹಾಳೆಯಲ್ಲಿ ಅಚ್ಚಾಗುವ ಅಕ್ಷರಗಳಿಗೆ ಕಾಂಪಿಟೇಷನ್ ನೀಡಲು ಸಾಧ್ಯವಿಲ್ಲ. ಒಂದು ಸಣ್ಣ ವಿಷಯ ಹಿಡಿದು ಪುಟ್ಟಗಟ್ಟಲೆ ಓದುಗನಿಗೆ ಬೋರ್ ಆಗದ ರೀತಿಯಲ್ಲಿ ಸಾಹಿತ್ಯ ರಚನೆ ಮಾಡಲು ನುರಿತ ಸಾಹಿತಿಗಳೇ ಸೂಕ್ತ. ಕಥೆ, ಸಂಭಾಷಣೆ, ಸಿನಿಮಾ ಸ್ಕ್ರಿಪ್ಟ್ ಹೀಗೆ ಸಾಹಿತ್ಯದ ಯಾವ ಬಗೆಯನ್ನೂ ತೆಗೆದುಕೊಂಡರು ಅವುಗಳಲ್ಲಿ ಎಐ ಮನುಷ್ಯನೆದುರು ಸೋತು ಮಂಡಿಯೂರಲೇ ಬೇಕು. ಅದೆಂತಹ ಟೆಕ್ನಾಲಜಿ ಬಂದರೂ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಬರಹಗಾರರ ಕೆಲಸಕ್ಕಂತೂ ಮುಂದಿನ ಅದೆಷ್ಟೇ ವರ್ಷಗಳು ಕಳೆದರೂ ಕೂಡ ಕೆಲಸದ ಭದ್ರತೆಯಿದೆ ಎಂದರೆ ತಪ್ಪಾಗದು. ನಾವು ಕೇಳುವ ಪ್ರಶ್ನೆಗೆ ಕೇವಲ ಪ್ರತಿಕ್ರಿಯಿಸುವ ಎಐನಿಂದ ಸಾಹಿತ್ಯ ರಚನೆ ಸಾಧ್ಯವ? ಅನ್ನುವ ಪ್ರಶ್ನೆಗೆ ಪ್ರಾಕ್ಟಿಕಲ್ ಉತ್ತರ, “ಖಂಡಿತ ಇಲ್ಲ”.

ಜಗತ್ತನ್ನು ಎಲ್ಲರಿಗಿಂತ ಭಿನ್ನವಾಗಿ ಹತ್ತು ಹಲವಾರು ರೀತಿಯಲ್ಲಿ ಕಂಡು, ಹತ್ತಾರು ಪುಸ್ತಕಗಳನ್ನು ಓದಿ, ನೂರಾರು ಬಾರಿ ಬರೆದು ಅಳಿಸಿ, ಭಾವನೆಗಳನ್ನು ಅಕ್ಷರಗಳ ಮೂಲಕ ಪೋಣಿಸುವ ಸಾಹಿತಿಗೂ, ಮನುಷ್ಯನ ಭಾವನೆಗಳ ಬಗ್ಗೆ ಪ್ರಶ್ನಿಸಿದಾಗ ಯಾರೋ ತುಂಬಿಸಿಟ್ಟ ರೆಡಿಮೇಡ್ ಉತ್ತರ ನೀಡುವ ಎಐ ತಂತ್ರಜ್ಞಾನಕ್ಕೂ ಅಜಗಜಾ0ತರ ವ್ಯತ್ಯಾಸವಿದೆ.

ಅಕ್ಷರಗಳನ್ನು ಪೋಣಿಸುವುದು ಸುಲಭವಲ್ಲ, ಬಚ್ಚಿಟ್ಟ ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ಕೊಡುವ ಧೈರ್ಯ ಬರಬೇಕು, ಓದುಗ ಅದನ್ನು ಓದುವಾಗ ನನ್ನದೇ ಕಥೆ ಅಂತ ಅವನಿಗೆ ಅನ್ನಿಸಬೇಕು,ಪುಸ್ತಕ ಸಹಸ್ರ ಪುಟ್ಟವಿದ್ದರೂ ಓದುವ ತಾಳ್ಮೆ ಅವನಲ್ಲಿ ಬರೆಬೇಕು, ಕೊನೆಯ ಪುಟಕ್ಕೆ ಬಂದು ನಿಂತಾಗ ಮುಖದಲ್ಲಿ ಸಣ್ಣದೊಂದು ನಗುವೋ ಅಥವ ಕಣ್ಣ0ಚು ಕೊಂಚವಾದರೂ ಒದ್ದೆಯಾಗಬೇಕು. ಈ ರೀತಿ ಮನುಷ್ಯನ ಭಾವನೆಗಳನ್ನು ಕೇವಲ ಅಕ್ಷರಗಳಲ್ಲಿ ನಿಯಂತ್ರಿಸುವ ತಾಕತ್ತು ಸಾಹಿತಿಗಳಿಗೆ ಮಾತ್ರ ಇರುವುದೇ ಹೊರತು ಎಐಗಲ್ಲ.
ಚೇತನ್ ಕಾಶಿಪಟ್ನ



