ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಯೆಮೆನ್ ಅಧಿಕಾರಿಗಳು ಮುಂದೂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮರಣದಂಡನೆಯನ್ನು ಬುಧವಾರ ನಿಗದಿಪಡಿಸಲಾಗಿತ್ತು. ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್ ಮೂಲದ ಪ್ರಿಯಾ, ಜುಲೈ 2017 ರಲ್ಲಿ ಯೆಮೆನ್ ಪ್ರಜೆಯೊಬ್ಬರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ ಈ ಶಿಕ್ಷೆಗೆ ಗುರಿಯಾಗಿದ್ರು. ಯೆಮನ್‌ನ ಸ್ಥಳೀಯ ಅಧಿಕಾರಿಗಳು ಜುಲೈ 16 ರಂದು ನಿಗದಿಯಾಗಿದ್ದ ಮರಣದಂಡನೆಯನ್ನು ಮುಂದೂಡಿದ್ದಾರೆ ಎಂದು ತಿಳಿದುಬಂದಿದೆ.

38 ವರ್ಷದ ನರ್ಸ್ ಪ್ರಸ್ತುತ ಇರಾನ್ ಬೆಂಬಲಿತ ಹೌತಿಗಳ ನಿಯಂತ್ರಣದಲ್ಲಿರುವ ಯೆಮೆನ್ ರಾಜಧಾನಿ ಸನಾದಲ್ಲಿರುವ ಜೈಲಿನಲ್ಲಿದ್ದಾರೆ. ಸೂಫಿ ನಾಯಕ ಶೇಖ್ ಹಬೀಬ್ ಉಮರ್ ಬಿನ್ ಹಫೀಜ್ ಅವರ ಪ್ರತಿನಿಧಿಗಳು ಮತ್ತು ಮಹ್ದಿ ಅವರ ಕುಟುಂಬದ ನಡುವೆ ಧಮರ್‌ನಲ್ಲಿ ಮಾತುಕತೆ ನಡೆಯುತ್ತಿರುವುದರಿಂದ ಮರಣದಂಡನೆ ವಿಳಂಬವಾಗಿದೆ. ಪ್ರಮುಖ ಭಾರತೀಯ ಸುನ್ನಿ ನಾಯಕ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್, ಶೇಖ್ ಅಬುಬಕರ್ ಅಹ್ಮದ್ ಅವರ ಮಧ್ಯಸ್ಥಿಕೆಯ ಮೂಲಕ ಸಭೆಯನ್ನು ಏರ್ಪಡಿಸಲಾಗಿತ್ತು. 2020ರಲ್ಲಿ, ಯೆಮೆನ್ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತ್ತು ಮತ್ತು ದೇಶದ ಸುಪ್ರೀಂ ನ್ಯಾಯಾಂಗ ಮಂಡಳಿಯು ನವೆಂಬರ್ 2023ರಲ್ಲಿ ಅವರ ಮೇಲ್ಮನವಿಯನ್ನು ವಜಾಗೊಳಿಸಿತು.



