ಬಹುಷಃ ಇಂತದೊಂದು ಸಿನಿಮಾವನ್ನು ಇಡೀ ಭಾರತೀಯ ಸಿನಿಮಾ ರಂಗದಲ್ಲಿ ಮಲಯಾಳಂ ಚಿತ್ರರಂಗ ಮಾತ್ರ ಮಾಡಲು ಸಾಧ್ಯ. ವಿಭಿನ್ನತೆಯ ಜೊತೆಗೆ ಸಿನಿಮಾ ಲೋಕದ ಹೊಸದೊಂದು ಆಯಾಮವನ್ನು, ಹೊಸ ಸಾಧ್ಯತೆಗಳನ್ನು ಪ್ರತಿ ಸಿನಿಮಾದಲ್ಲೂ ಎತ್ತಿ ತೋರಿಸುವುದು ಮಾಲಿವುಡ್ ನ ಸ್ವಾಭಾವಿಕ ಲಕ್ಷಣ ಎಂಬುದು ಎಲ್ಲರಿಗೂ ತಿಳಿದೇ ಇದೆ. ಅತ್ಯಂತ ಕಡಿಮೆ ಬಜೆಟ್ ನಲ್ಲಿ ಸದಾ ಬಲವಾದ ಕಂಟೆಂಟ್ ಹಿಡಿದು ಸಿನಿಮಾ ಹೆಣೆಯುವ ನಿಪುಣತೆ ಮಲಯಾಳಂ ಸಿನಿತಜ್ಞರಿಗೆ ಸಹಜವಾಗಿ ಮೈಗೂಡಿದೆ. ಸಿನಿಮಾಗಳು ಕಲೆಕ್ಷನ್ ವಿಚಾರದಲ್ಲಿ ಸದ್ದು ಮಾಡದೇ ಹೋದರು, ಅವರ ಪ್ರತಿ ಸಿನಿಮಾದ ಕಂಟೆಂಟ್ ಸದ್ದು ಮಾಡುವುದರಲ್ಲಿ ಎರಡು ಮಾತಿಲ್ಲ.
ಇದು ಸ್ವಲ್ಪ ಕಟುವಾದ ವಿಮರ್ಶೆ ಅನ್ನಿಸಬಹುದು, ಆದರೂ ನನ್ನ ಪ್ರಕಾರ ನಿಜವಾದ ಸಿನಿನಟರು, ತಜ್ಞರು, ನಿರ್ದೇಶಕರು, ಅದ್ಬುತ ಬರಹಗಾರರು ಇರುವುದು ಮಲಯಾಳಂ ಸಿನಿಮಾ ರಂಗದಲ್ಲಿ ಮಾತ್ರ ಅನ್ನಿಸುತ್ತದೆ. ಸದಾ ಕಲೆಕ್ಷನ್ ಬಗ್ಗೆ ತಲೆಕೆಡಿಸಿಕೊಳ್ಳದೆ, ಕಥೆಗೆ ಭಂಗ ತರುವ ವಿಚಾರಗಳನ್ನು ಸಿನಿಮಾದಲ್ಲಿ ಬಳಸದೆ, ಪ್ಯೂರ್ ಫಾರ್ಮ್ ಆಫ್ ಸಿನಿಮಾವನ್ನು ಕೊಡುವುದರಲ್ಲಿ ಮಾಲಿವುಡ್ ಮುಂಚೂಣಿಯಲ್ಲಿದೆ ಎಂಬುದು ನನ್ನ ಅಭಿಪ್ರಾಯ. ಇದಕ್ಕೆ ನಿದರ್ಶನವೆಂಬಂತೆ ಕೆಳ ತಿಂಗಳುಗಳ ಹಿಂದೆ ಬಿಡುಗಡೆಯಾದ ಪೊನ್ಮನ್ ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಜ್ಯೋತಿಶ್ ಶಂಕರ್ ನಿರ್ದೇಶನದ ಈ ಸಿನಿಮಾದಲ್ಲಿ ಮಲಯಾಳಂ ಸಿನಿಮಾರಂಗದ ಒನ್ ಆಫ್ ದಿ ವರ್ಸಟೈಲ್ ನಟ ಎನಿಸಿರುವ ಬ್ಯಾಸಿಲ್ ಜೋಸೆಫ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು 2 ಗಂಟೆ 5 ನಿಮಿಷ ಡ್ಯೂರೇಷನಿರುವ ಈ ಸಿನಿಮಾವು ಮಧ್ಯಮ ವರ್ಗದ ಕುಟುಂಬವೊಂದು ಮದುವೆಗೆ ಚಿನ್ನ ಹೊಂದಿಸಲು ಪಡುವ ಕಷ್ಟ, ಅದರಿಂದ ಎದುರಾಗುವ ಒಂದು ಸಮಸ್ಯೆ, ಸಮಸ್ಯೆಯಿಂದ ನಾಯಕನಟನೂ ಕೂಡ ತೊಂದರೆಗೀಡಾಗಿ ಅದರಿಂದ ಪಾರಾಗುವ ಸರಳ ಕಥಾ ಹಂದರವನ್ನು ಹೊಂದಿದೆ.
ಒಂದೇ ಮಾತಿನಲ್ಲಿ ಈ ಸಿನಿಮಾವನ್ನು ವಿಮರ್ಶೆ ಮಾಡುವುದಾದರೆ, ಇದು ಎಲ್ಲರಿಗೂ ಇಷ್ಟ ಆಗುವ ಸಿನಿಮಾ ಅಲ್ಲ. ತುಂಬಾ ಸ್ಲೋ ಆಗಿ ಸಾಗುವ ಸಿನಿಮಾ ಇದಾಗಿದ್ದು ಸಿನಿಮಾದ ಕುರಿತ ಜ್ಞಾನ ಮತ್ತು ಆಸಕ್ತಿ ಇರುವ ಬಹುತೇಕರ ಮನಮುಟ್ಟುವುದರಲ್ಲಿ ಎರಡು ಮಾತಿಲ್ಲ. ಪ್ರತಿ ದೃಶ್ಯದಲ್ಲೂ, ಪ್ರತಿ ಒಬ್ಬರ ನಟನೆಯಲ್ಲೂ, ಪ್ರತಿ ಫ್ರೇಮಿನಲ್ಲಿಯೂ ಕಲಿಯುವ ನೂರಾರು ಅಂಶವಿದೆ. ಒಂದೇ ಒಂದು ಅನವಶ್ಯಕ ಹಾಡಿಲ್ಲದೆ, ಫೈಟ್ ಇಲ್ಲದೇ, ಸುಖಾಸುಮ್ಮನೆ ತೋರಿಸಲಾಗುವ ಬಿಲ್ಡ್ ಅಪ್ ಸೀನ್ ಗಳಿಲ್ಲದೆ ಈ ಸಿನಿಮಾವನ್ನು ಕಟ್ಟಿರುವ ರೀತಿ ನಿಜಕ್ಕೂ ನೂರಾರು ಯುವ ಫಿಲಂ ಮೇಕರ್ಸ್ ಗಳಿಗೆ ಸಿನಿಮಾವನ್ನು ಹೀಗೂ ಮಾಡಬಹುದು ಎಂಬ ದೃಢ ಸಂದೇಶ ನೀಡಿದಂತಿದೆ.
ಸಿನಿಮಾದ ಪ್ರಮುಖ ಪ್ಲಸ್ ಪಾಯಿಂಟ್ ಬರವಣಿಗೆ. ಸಿನಿಮಾವೊಂದರ ಬರವಣಿಗೆ ಬಲವಾಗಿದ್ದರೆ ಅದು ಅರ್ಧ ಗೆದ್ದಂತೆ ಎಂಬ ಮಾತು ಈ ಸಿನಿಮಾದಲ್ಲಿ ಬಹುತೇಕ ಸಾಬೀತಾಗಿದೆ. ಪ್ರತಿಯೊಂದು ಸಣ್ಣ ಸಣ್ಣ ವಿಷಯಕ್ಕೂ ನಿರ್ದೇಶಕ ಜ್ಯೋತಿಶ್ ಶಂಕರ್ ಕೊಟ್ಟಿರುವ ಪ್ರಾಮುಖ್ಯತೆ ಸಿನಿಮಾವನ್ನು ಮತ್ತಷ್ಟು ಶೃಂಗಾರಗೊಳಿಸಿದೆ. ಈ ಸಿನಿಮಾದಲ್ಲಿ ಬರುವ ಎರಡು ಊರುಗಳ ಲೊಕೇಶನ್ ಅಂತೂ ಅದ್ಬುತ, ಆ ಜಾಗಗಳನ್ನು ಕ್ಯಾಮೆರ ಕಣ್ಣುಗಳಲ್ಲಿ ಅಚ್ಚುಕಟ್ಟಾಗಿ ಸೆರೆಹಿಡಿದ ಪರಿಯಂತೂ ಇನ್ನೂ ಅದ್ಭುತ. ಈ ಚಿತ್ರ ಅದ್ಬುತವಾಗಿ ಮೂಡಿಬರುವಲ್ಲಿ ಪ್ರತಿಯೊಬ್ಬ ನಟರ ನೈಜ ಅಭಿನಯ ಸಿಂಹಪಾಲು ಪಡೆಯುತ್ತದೆ.
ವೈಯಕ್ತಿಕವಾಗಿ ನನಗೆ ಬ್ಯಾಸಿಲ್ ಜೋಸೆಫ್ ಹೊರತಾಗಿ ಇಷ್ಟವಾದ ಮತ್ತೊಂದು ಪಾತ್ರವೆಂದರೆ ಬ್ರುನೋ ಅನ್ನುವ ಪಾತ್ರ. ಆ ಪಾತ್ರ ಮಾಡಿದ ಅರ್ವೆಸ್ ಶೋನಿಯ ನಟನೆ ಮತ್ತು ಆ ಪಾತ್ರವನ್ನು ಬರೆದಿರುವ ರೀತಿ ಅದ್ಬುತ ಎನಿಸಿತು. ಇನ್ನು ಸಿನಿಮಾ ಪೂರ್ತಿಯಾಗಿ ಆವರಿಸಿರುವುದು ಬ್ಯಾಸಿಲ್ ಜೋಸೆಫ್ ಅವರ ಅಜೇಶ್ ಪಾತ್ರ. ಅಕ್ಷರಶ ಆ ಮಾತ್ರವನ್ನು ಬ್ಯಾಸಿಲ್ ಜೀವಿಸಿದ್ದಾರೆ ಎಂದರೆ ತಪ್ಪಾಗದು. ಈ ಸಿನಿಮಾದಲ್ಲಿ ಅವರ ಅಭಿನಯದ ಚತುರತೆ ಎಷ್ಟಿದೆಯೆಂದರೆ ಕೇವಲ ಬಾಯಿ ಮಾತ್ರವಲ್ಲ ಅವರ ಕಣ್ಣುಗಳು ಕೂಡ ಸಿನಿಮಾದಲ್ಲಿ ಮಾತನಾಡುವಂತೆ ನಮಗೆ ಭಾಸವಾಗುತ್ತದೆ. ಬ್ಯಾಸಿಲ್ ಅವರ ಹಾಸ್ಯ, ಆಕ್ಷನ್, ಎಮೋಷನ್ ಎಲ್ಲವನ್ನೂ ನೋಡಿದ ಅಭಿಮಾನಿಗಳಿಗೆ ಈ ಸಿನಿಮಾ ಅವರನ್ನು ವಿಭಿನ್ನವಾಗಿ ತೋರಿಸುತ್ತದೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ಬ್ಯಾಸಿಲ್ ಜೋಸೆಫ್ ಅವರ ಅಜೇಶ್ ಪಾತ್ರಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಇದು ಎಲ್ಲರನ್ನು ಆಕರ್ಷಿಸುವ ಸಿನಿಮಾವಲ್ಲ ಬದಲಾಗಿ ಕೆಲವರನ್ನು ಸಂಪೂರ್ಣವಾಗಿ ಆವರಿಸುವ ಸಿನಿಮಾ. ಒನ್ ಟೈಮ್ ನೋಡುವುದರಲ್ಲಿ ಯಾವುದೇ ನಷ್ಟವಿಲ್ಲ, ನನ್ನ ಪ್ರಕಾರ ಸಿನಿಮಾಗೆ ಐದರಲ್ಲಿ ನಾಲ್ಕು ಸ್ಟಾರ್ ಕೊಡಬಹುದು. ವಿಪರ್ಯಾಸವೆಂದರೆ ಇಂತಹ ಸಿನಿಮಾಗಳ ಹೊರತಾಗಿಯೂ ಕಳೆದ ವರ್ಷ ಮಲಯಾಳಂ ಸಿನಿಮಾ ರಂಗಕ್ಕೆ ಸುಮಾರು 700 ಕೋಟಿಯಷ್ಟು ನಷ್ಟವಾಗಿದೆ. ನಿಜವಾದ ಕಂಟೆಂಟ್ ಆಧಾರಿತ ಸಿನಿಮಾಗಳಿಗೆ ಸಿನಿ ಪ್ರೇಕ್ಷಕರ ಪ್ರೋತ್ಸಾಹ ಎಷ್ಟಿದೆ ಎಂಬುದು ಇದರಲ್ಲಿಯೇ ತಿಳಿಯುತ್ತದೆ. ಪ್ರೇಕ್ಷಕರು ಇನ್ನಾದರೂ ಸಿನಿಮಾ ಸ್ವೀಕರಿಸುವ ದೃಷ್ಟಿಕೋನ ಬದಲಾಗಬೇಕು, ಆಗ ಮಾತ್ರ ಇಂತಹ ವಿಭಿನ್ನ ಪ್ರಯತ್ನಗಳು ಸಿನಿ ರಂಗದಲ್ಲಿ ಸಾಧ್ಯ. ಸದಾ ಪ್ರೇಕ್ಷಕರು ಮಲಯಾಳಂ ಸಿನಿ ರಂಗಕ್ಕೆ ಮಾರುಹೋಗುವುದಕ್ಕೆ, ಹಾಡಿ ಹೊಗಳುವುದಕ್ಕೆ ಇಂತಹ ಸಿನಿಮಾಗಳೇ ಕಾರಣ.
ಕನ್ನಡದಲ್ಲೂ ಇಂತಹ ವಿಭಿನ್ನ ಪ್ರಯತ್ನಗಳು ನಡೆಯಲಿ. ಇತ್ತೀಚಿಗೆ ತೆರೆಕಂಡ “ಸು ಫ್ರಮ್ ಸೋ ” ಸಿನಿಮಾ ರೀತಿಯಲ್ಲಿ ಜನರನ್ನು ಹಿಡಿದು ಕೂರಿಸುವ ಕಂಟೆಂಟ್ ಗಳು ಬರಲಿ ಎಂಬುದೇ ನಮ್ಮೆಲ್ಲರ ಆಶಯ.
ಚೇತನ್ ಕಾಶಿಪಟ್ನ
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…