ಮಂಗಳೂರು ಮಹಾ ನಗರ ಪಾಲಿಕೆಯ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಪಾವತಿ ರಶೀದಿಯ ನಕಲಿ ಸೃಷ್ಟಿ ಮತ್ತು ವಂಚನೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೃಥ್ವಿರಾಜ್ ಶೆಟ್ಟಿ ಅಲಿಯಾಸ್ ಮುನ್ನ ಬಂಧಿತ ಆರೋಪಿ. 
ಈತ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಶ್ರೀ ರಾಜ ದುರ್ಗಾ ಫರ್ನಿಚರ್ ವರ್ಕ್ಸ್’ ಎಂಬ ಉದ್ದಿಮೆ ಹೊಂದಿರುವ ಬಾಲಕೃಷ್ಣ ಸುವರ್ಣ ಎಂಬವರು ನ್ಯಾಯಾಲಯದ ಪ್ರಕರಣದಲ್ಲಿ ವ್ಯವಹರಿಸಲು ದಾಖಲಾತಿಗಳನ್ನು ಪಡೆದುಕೊಳ್ಳಲು ಮಂಗಳೂರು ಮಹಾನಗರ ಪಾಲಿಕೆಗೆ ಭೇಟಿ ನೀಡಿದ್ದು, ಆ ಸಂದರ್ಭ ಅವರ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಅನೂರ್ಜಿತಗೊಂಡಿರುವುದು ತಿಳಿದು ಬಂದಿರುತ್ತದೆ. ಆದರೆ ಬಾಲಕೃಷ್ಣ ಸುವರ್ಣರವರಲ್ಲಿ ಊರ್ಜಿತವಾಗಿರುವ ಉದ್ದಿಮೆ ಪರವಾನಗಿ ಹಾಗೂ ಆಸ್ತಿ ತೆರಿಗೆ ಇದ್ದು, ಇದನ್ನು ಪರಿಶೀಲಿಸಿದಾಗ ಬಾಲಕೃಷ್ಣ ಸುವರ್ಣರವರಿಂದ ಪೃಥ್ವಿರಾಜ್ ಶೆಟ್ಟಿ ಅಲಿಯಾಸ್ ಮುನ್ನಾ ಎಂಬಾತನು 27,990 ರೂ. ಹಣವನ್ನು ಪಡೆದುಕೊಂಡು ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ರಶೀದಿಗಳನ್ನು ನಕಲಿಯಾಗಿ ಸೃಷ್ಟಿಸಿ ನೀಡಿರುವುದು ತಿಳಿದು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಜೊತೆಗೆ ಬಾಲಕೃಷ್ಣ ಸುವರ್ಣರವರು ನಕಲಿ ಉದ್ದಿಮೆ ಪರವಾನಿಗೆಯನ್ನು ಹಾಗೂ ಆಸ್ತಿ ತೆರಿಗೆಯನ್ನು ಸೃಷ್ಟಿಸಿ ವಂಚಿಸಿರುವ ಬಗ್ಗೆ ಪೃಥ್ವಿರಾಜ್ ಶೆಟ್ಟಿ ವಿರುದ್ಧ ದೂರು ನೀಡಿ ಪ್ರಕರಣ ದಾಖಲಾಗಿದ್ದು, ತನಿಖೆ ಇನ್ನು ಕೂಡ ಪ್ರಗತಿಯಲ್ಲಿದೆ. ಇನ್ನು ಪಂಪ್ ವೆಲ್ ನಲ್ಲಿರುವ ಲಕ್ಷ್ಮಿ ಹಾರ್ಡ್ ವೇರ್ ವರ್ಕ್ ಶಾಪ್ ನ ಮಾಲೀಕರಾದ ದೇವಾಂಗ ಕೆ. ಪಟೇಲ್ ರವರು ಕೂಡಾ ಪೃಥ್ವಿರಾಜ್ ಶೆಟ್ಟಿ ನಕಲಿ ಉದ್ದಿಮೆ ಪರವಾನಿಗೆಯನ್ನು ಹಾಗೂ ನಕಲಿ ಆಸ್ತಿ ತೆರಿಗೆಯನ್ನು ಸೃಷ್ಟಿಸಿ ವಂಚಿಸಿರುವ ಬಗ್ಗೆ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣ ದಾಖಲಾದ ವೇಳೆ ಮಂಗಳೂರು, ಉಜ್ಜೋಡಿ, ಬೈಕ್ ಕ್ಲಿನಿಕ್ ಹತ್ತಿರದ ನಿವಾಸಿಯಾಗಿದ್ದ ಆರೋಪಿ ಪೃಥ್ವಿರಾಜ್ ಶೆಟ್ಟಿ ತಲೆಮರೆಸಿಕೊಂಡಿದ್ದ. ಆರೋಪಿಯು ಕೇರಳದ ಹಲವು ಕಡೆಗಳಲ್ಲಿ ತಲೆಮರೆಸಿಕೊಂಡು ನಂತರ ಕಿನ್ನಿಗೋಳಿಗೆ ಬರುತ್ತಿದ್ದಾನೆ ಎಂಬ ಮಾಹಿತಿಯ ಮೇರೆಗೆ ಜುಲೈ 25ರಂದು ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಇನ್ನೂ ಇತರ ಉದ್ದಿಮೆದಾರರಿಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ನೀಡಿರುತ್ತಾನೆಯೇ ಎಂಬ ಬಗ್ಗೆ ಕಂಕನಾಡಿ ಮತ್ತು ಬರ್ಕೆ ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ.



