ಕೊಟ್ಟಿಗೆ ಚಿರತೆಗಳು ನುಗ್ಗಿದ್ದು, ಸಿಕ್ಕ ಸಿಕ್ಕ ಕುರಿಗಳ ಮೇಲೆ ದಾಳಿ ಮಾಡಿವೆ. ಪರಿಣಾಮ 30ಕ್ಕೂ ಹೆಚ್ಚು ಕುರಿಗಳ ಮಾರಣಹೋಮವಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸಿರಿಗೆರೆ ಕ್ರಾಸ್ ಬಳಿ ಈ ಘಟನೆ ನಡೆದಿದೆ. ದಿಳ್ಳೆಪ್ಪ ಎಂಬ ರೈತನ ಅಡಿಕೆ ತೋಟದಲ್ಲಿ ಕುರಿಗಳ ಹಟ್ಟಿ ಹಾಕಿಕೊಂಡಿದ್ರು. ಆದ್ರೆ, ತಡರಾತ್ರಿ ಭರ್ಜರಿ ಮಳೆ ಬಂದ ಹಿನ್ನೆಲೆ ಕುರಿಗಳನ್ನ ಅಲ್ಲಿಯೇ ಬಿಟ್ಟು ಬೆಳಗಾವಿ ಮೂಲದ ಕುರಿಗಾಯಿಗಳು ಎತ್ತರದ ಸ್ಥಳಕ್ಕೆ ಹೋಗಿದ್ದಾರೆ. ಈ ವೇಳೆ ಎರಡ್ಮೂರು ಚಿರತೆಗಳು ಕೊಟ್ಟಿಗೆ ನುಗ್ಗಿದ್ದು, ಸಿಕ್ಕ ಸಿಕ್ಕ ಕುರಿಗಳ ಮೇಲೆ ದಾಳಿ ಮಾಡಿವೆ.

ಕುರಿಗಳನ್ನು ಅರ್ಧಂಬರ್ಧ ಕಚ್ಚಿ ತಿಂದು ಪರಾರಿಯಾಗಿವೆ. ಇದರಿಂದ 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು, ಕುರಿಗಾಯಿಗಳು ಕಂಗಾಲಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ನಿವಾಸಿ ಸೋಮಣ್ಣ ಎಂಬವರಿಗೆ ಸೇರಿದ ಕುರಿಗಳು ಎಂದು ತಿಳಿದುಬಂದಿದೆ. ಇನ್ನು ವಿಷಯ ತಿಳಿದು ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುತ್ತಲಿನ ಪ್ರದೇಶದಲ್ಲಿ ಎರಡರಿಂದ ಮೂರು ಚಿರತೆಗಳ ಸುತ್ತಾಟದ ಮಾಹಿತಿ ಇದೆ ಎಂದಿದ್ದಾರೆ.



